ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವಿಚಾರ: ಬಸವರಾಜ ಬೊಮ್ಮಾಯಿ ಹೇಳಿದ್ದೇನು?

Update: 2023-07-16 14:03 GMT

ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದು ನಮ್ಮ ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಪಕ್ಷದ ವರಿಷ್ಠರು ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ಈಗಾಗಲೆ ಎಚ್.ಡಿ.ಕುಮಾರಸ್ವಾಮಿ ಕೆಲವೊಂದಿಷ್ಟು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆ ಫಲಶೃತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರವಿವಾರ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕನ ಆಯ್ಕೆ ಜು.18ರ ನಂತರ ಘೋಷಣೆ ಆಗಬಹುದು ಎಂಬ ಮಾಹಿತಿ ಇದೆ. ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗುವುದು ಕೇವಲ ಊಹಾಪೋಹ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬರುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಈಗಾಗಲೇ ಯಡವಟ್ಟಾಗಿದೆ. ದಿನಾಂಕದ ಮೇಲೆ ದಿನಾಂಕ ಮುಂದೂಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಯಾವುದೆ ನಿರ್ದಿಷ್ಟವಾದ ನಿಯಮಗಳನ್ನು ಮಾಡುತ್ತಿಲ್ಲ. ದೊಡ್ಡ ಭಾರ ಆಗುತ್ತಿರುವ ಈ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಉದ್ದೇಶ ಸರಕಾರಕ್ಕಿಲ್ಲ ಎಂದು ಅವರು ಟೀಕಿಸಿದರು.

ದಿನಾಂಕ ಮುಂದೆ ಹಾಕಿ ಕೆಲವೆ ಸಮಯದಲ್ಲಿ, ಕೆಲವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುವಂತೆ ಮಾಡುವ ಉದ್ದೇಶ ಸರಕಾರಕ್ಕಿದೆ. ತಾಯಂದಿರಿಗೆ, ರಾಜ್ಯದ ಹೆಣ್ಣುಮಕ್ಕಳಿಗೆ ಭ್ರಮನಿರಸನ ಮಾಡುವಂತಹ ಉದ್ದೇಶ ಈ ಯೋಜನೆ ಹಿಂದಿದೆ. ಅಧಿವೇಶನದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಪ್ರತಿಪಕ್ಷಗಳ ಸಭೆಯಿಂದ ರಾಜಕೀಯ ಲಾಭವಾಗುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ. ಪ್ರತಿಕ್ಷಗಳ ಸಭೆಯಿಂದ ಯಾವುದೆ ರಾಜಕೀಯ ಲಾಭವಾಗುವುದಿಲ್ಲ. ಪ್ರತಿ ಪಕ್ಷಗಳು ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಸಭೆ ಮಾಡುತ್ತಿವೆ. ಆದರೆ ಇಡೀ ಭಾರತದಲ್ಲಿ ಪ್ರತಿ ಪಕ್ಷಗಳು ಶಕ್ತಿಯುಯತವಾಗಿಲ್ಲ ಎಂದು ಅವರು ತಿಳಿಸಿದರು.

ಪ್ರತಿ ಪಕ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳೆ ಹೆಚ್ಚಿವೆ. ಅವು ಆಯಾ ರಾಜ್ಯಗಳಲ್ಲಿ ಪ್ರತಿಪಕ್ಷಗಳಾಗಿ ಕೆಲಸ ಮಾಡುತ್ತಿವೆ. ಒಕ್ಕೂಟ ರಚನೆಯಿಂದ, ನಾಳೆ ನಡೆಯುವ ಪ್ರತಿಪಕ್ಷ ಸಭೆಯಿಂದ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ. ಮೋದಿಯನ್ನು ಸೋಲಿಸಬೇಕೆಂದು ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾಗುತ್ತಿದ್ದಾರೆ. ಅದು ಸಾಧ್ಯವಿಲ್ಲದ ಮಾತು. ಪ್ರತಿ ಪಕ್ಷಗಳಿಗೆ ಯಾವುದೇ ಸ್ವಂತ ಬಲವಿಲ್ಲ, ನಿರ್ದಿಷ್ಟವಾದ ಕಾರ್ಯಕ್ರಮವಿಲ್ಲ. ಭಾರತವು ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢವಾಗಿದೆ. ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನರೇಂದ್ರ ಮೋದಿಗೆ ಗೌರವ, ಮನ್ನಣೆ ಸಿಗುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News