ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧ ಬಂಧನ ವಾರಂಟ್ ಜಾರಿ
ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಜಮೆ ವಂಚನೆಗೆ ಸಂಬಂಧಿಸಿದಂತೆ ಮಾಜಿ ಭಾರತೀಯ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ವಿರುದ್ಧ ಬಂಧನದ ವಾರಂಟ್ ಜಾರಿಯಾಗಿದೆ.
ಈ ವಾರಂಟ್ ಅನ್ನು ಪ್ರಾಂತೀಯ ಭವಿಷ್ಯ ನಿಧಿ ಆಯುಕ್ತ-2 ಹಾಗೂ ಬೆಂಗಳೂರಿನ ಕೆ.ಆರ್.ಪುರಂನ ವಸೂಲಾತಿ ಅಧಿಕಾರಿ ಷಡಕ್ಷರ ಗೋಪಾಲ್ ರೆಡ್ಡಿ ಜಾರಿಗೊಳಿಸಿದ್ದಾರೆ.
ಸೆಂಟೌರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈ. ಲಿ.ನ ನಿರ್ದೇಶಕರಾಗಿರುವ ಬಾಕಿದಾರ ರಾಬಿನ್ ಉತ್ತಪ್ಪರಿಂದ 23.36 ಲಕ್ಷ ರೂ. ವಸೂಲಿ ಮಾಡಬೇಕಿದೆ ಎಂದು ತಮ್ಮ ಆದೇಶದಲ್ಲಿ ಷಡಕ್ಷರ ಗೋಪಾಲ್ ರೆಡ್ಡಿ ಆರೋಪಿಸಿದ್ದಾರೆ.
“ಬಾಕಿ ಮೊತ್ತವನ್ನು ಜಮೆ ಮಾಡದೆ ಇರುವುದರಿಂದ, ಬಡ ಕಾರ್ಮಿಕರ ಭವಿಷ್ಯ ನಿಧಿ ಖಾತೆಗಳನ್ನು ವಿಲೇವಾರಿ ಮಾಡಲು ಈ ಕಚೇರಿಗೆ ಅಸಾಧ್ಯವಾಗಿದೆ” ಎಂದು ಪುಲಕೇಶಿನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಜಾರಿಗೊಳಿಸಲಾಗಿರುವ ವಾರಂಟ್ ನಲ್ಲಿ ಹೇಳಲಾಗಿದೆ. “ಈ ಹಿನ್ನೆಲೆಯಲ್ಲಿ ನೀವು ಬಂಧನದ ವಾರಂಟ್ ಅನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಗಿದೆ” ಎಂದೂ ಹೇಳಿದೆ.
ಆದೇಶದ ಪ್ರಕಾರ, ಒಂದು ವೇಳೆ ರಾಬಿನ್ ಉತ್ತಪ್ಪ ಬಾಕಿ ಮೊತ್ತವನ್ನು ಜಮೆ ಮಾಡಿದರೆ, ಸದರಿ ಆದೇಶವು ರದ್ದಾಗಲಿದೆ.