ಸಿ.ಟಿ. ರವಿ ಆಕ್ಷೇಪಾರ್ಹ ಶಬ್ದ ಬಳಸಿದ್ದಾರೆಂದು ನಾಲ್ವರು ಸಾಕ್ಷಿ ಹೇಳಿದ್ದಾರೆ: ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಶಬ್ದ ಬಳಸಿರುವ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ”ಸಿ.ಟಿ.ರವಿ ಅವರು ಮಾತನಾಡಿದ್ದಾರೆ ಎನ್ನಲಾದ ಯಾವುದೇ ಅವಾಚ್ಯ ಪದ ಬಳಕೆ ರೆಕಾರ್ಡ್ ಇಲ್ಲ. ಆದರೆ, ಆಕ್ಷೇಪಾರ್ಹ ಪದ ಬಳಸಿದ್ದಾರೆಂದು ನಾಲ್ವರು ಸಾಕ್ಷಿ ಹೇಳಿದ್ದಾರೆ" ಎಂದು ಹೇಳಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿ.ಟಿ.ರವಿ ಅವರು ಮಾತನಾಡಿದ್ದಾರೆ ಎನ್ನಲಾದ ಯಾವುದೇ ಅವಾಚ್ಯ ಪದ ಬಳಕೆ ರೆಕಾರ್ಡ್ ಇಲ್ಲ. ಆದರೆ, ಆಕ್ಷೇಪಾರ್ಹ ಪದ ಬಳಸಿದ್ದಾರೆಂದು ನಾಲ್ವರು ಸಾಕ್ಷಿ ಹೇಳಿದ್ದಾರೆ. ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ, ಕಾಂಗ್ರೆಸ್‍ನವರು ಕೇಂದ್ರ ಸಚಿವ ಅಮಿತ್ ಶಾ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಹಿನ್ನೆಲೆ ಕಲಾಪ ಮುಂದೂಡಿದೆ. ಆಗ ಇದೆಲ್ಲ ಗಲಾಟೆ ಆಯಿತು" ಎಂದಿದ್ದಾರೆ.
ನಾನು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಿ.ಟಿ.ರವಿ ಅವರನ್ನು ಕರೆದು ಮಾತನಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಎಂದು ಸಲಹೆ ಕೂಡ ನೀಡಿದ್ದೆ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನಿಸಿತು ಎಂದು ಅಸಮಾಧಾನ ಹೊರಹಾಕಿದರು.