ಚೀನಾ, ಪಾಕ್‌ ವಶದಲ್ಲಿ ಭಾರತದ ಭೂಭಾಗಗಳಿರುವಂತಹ ತಪ್ಪಾದ ನಕಾಶೆ ಬಳಸಿದ ಬಿಜೆಪಿ: ವ್ಯಾಪಕ ಆಕ್ರೋಶ

Update: 2023-07-15 11:52 GMT

Photo : Twitter /@zoo_bear 

ಹೊಸದಿಲ್ಲಿ: ಬಿಜೆಪಿ ಬಿಡುಗಡೆ ಮಾಡಿರುವ ಅನಿಮೇಟೆಡ್ ವೀಡಿಯೊದಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿ ವಿವಾದ ಸೃಷ್ಟಿಸಿದೆ. ಭಾರತದ ಕೆಲವು ಪ್ರದೇಶಗಳನ್ನು ಪಾಕಿಸ್ತಾನ ಮತ್ತು ಚೀನಾದಲ್ಲಿರುವ ನಕ್ಷೆಯನ್ನು ವಿಡಿಯೋ ಪ್ರಮೋಷನ್‌ಗಾಗಿ ಬಿಜೆಪಿ ಬಳಸಿದ್ದು, ಇದಕ್ಕೆ ನೆಟ್ಟಿಗರು ಹಾಗೂ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನು ಭಾರತದ ಪ್ರಾದೇಶಿಕ ಸಮಗ್ರತೆಯ ಮೇಲಿನ ʼದಾಳಿʼ ಎಂದು ಕರೆದಿರುವ ಕಾಂಗ್ರೆಸ್‌, ಬಿಜೆಪಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಗಿಂತ ಮಿಗಿಲಾದ ದೇಶದ್ರೋಹಿ ಯಾರೂ ಇಲ್ಲ. ಮೋದಿಯನ್ನು ಹೊಗಳಲು ಭಾರತದ ಪ್ರಾದೇಶಿಕ ಸಮಗ್ರತೆಗೆ ಅನಿಮೇಷನ್ ವಿಡಿಯೋದಲ್ಲಿ ಧಕ್ಕೆಯಾಗಿದೆ. ವಿಡಿಯೋದಲ್ಲಿ ಭಾರತದ ಭೂಮಿ ಪಾಕಿಸ್ತಾನ ಮತ್ತು ಚೀನಾಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಮೊದಲು ಅವರು (ಬಿಜೆಪಿ) ಅದನ್ನು ವೈರಲ್ ಮಾಡಿದೆ, ಬಳಿಕ ಜನರು ಆಕ್ಷೇಪಿಸಿದಾಗ ಅವರು ಅದನ್ನು ಅಳಿಸಿ ಓಡಿಹೋಗಿದ್ದಾರೆ. ಮೋದಿ-ಜಿ ಮತ್ತು ನಡ್ಡಾ-ಜಿ ದೇಶದ ಕ್ಷಮೆಯಾಚಿಸಬೇಕು, ಏಕೆಂದರೆ ಇದು ಪ್ರಮಾದವಲ್ಲ, ʼಅಪರಾಧ” ಎಂದು ಹೇಳಿದೆ.

“ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ಅನಿಮೇಟೆಡ್ ವೀಡಿಯೊವನ್ನು ಹಲವಾರು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ, ಇದರಲ್ಲಿ ʼಭಾರತದ ಕೆಲವು ಭಾಗಗಳನ್ನು ಪಾಕಿಸ್ತಾನ ಮತ್ತು ಚೀನಾದೊಂದಿಗೆ ತೋರಿಸಲಾಗಿದೆʼ ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷೆ ಸುಪ್ರಿಯಾ ಶ್ರಿನೇತ್ ಹೇಳಿದ್ದಾರೆ.

ಇದು ದೇಶದ ಸಮಗ್ರತೆಗೆ ತಂದಿರುವ ಧಕ್ಕೆ. ದೇಶದ ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಯಾರೆಂದು ಈ ಪ್ರಕರಣ ಹೇಳುತ್ತದೆ, ಅದು ಬಿಜೆಪಿಯೇ ಹೊರತು ಬೇರಾರೂ ಅಲ್ಲ ಎಂದು ಸುಪ್ರಿಯಾ ಹೇಳಿದ್ದಾರೆ.

ಸಿಟಿ ರವಿ, ಅಮಿತ್‌ ಮಾಳವೀಯ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ನೆಟ್ಟಿಗರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News