ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆ: ಶಿವಸುಂದರ್

Update: 2024-04-21 14:49 GMT

ಬೆಂಗಳೂರು: ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆಯಾಗಿದ್ದು, ಪ್ರಣಾಳಿಕೆ ಹೇಳುತ್ತಿರುವುದಕ್ಕೂ ಮತ್ತು ನಡೆದುಕೊಂಡಿರುವುದಕ್ಕೂ ಹೋಲಿಕೆಯೇ ಇಲ್ಲದಂತಾಗಿದೆ ಎಂದು ಅಂಕಣಕಾರ, ರಾಜಕೀಯ ವಿಶ್ಲೇಷಕ ಶಿವಸುಂದರ್ ಟೀಕಿಸಿದ್ದಾರೆ.

ರವಿವಾರ ನಗರದಲ್ಲಿರುವ ಕಸಾಪ ಅಕ್ಕಮಹಾದೇವಿ ಸಭಾಂಗಣದಲ್ಲಿ ಚಿಕ್ಕು ಕ್ರಿಯೇಷನ್ ವತಿಯಿಂದ ಆಯೋಜಿಸಿದ್ದ ಚಂದ್ರಪ್ರಭ ಕಠಾರಿಯವರ ‘ಕಠಾರಿ ಅಂಚಿನ ನಡಿಗೆ- ಸಮಕಾಲೀನ ವಿಡಂಬನೆಗಳ ಪುಸ್ತಕ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಸಬ್ ಕಾ ಸಾಥ್ ಸಬ್ ವಿಕಾಸ್ ಎನ್ನುತ್ತಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ತಂದಿರುವುದಾಗಿ ಹೇಳುತ್ತಾರೆ ಎಂದರು.

ಚಂದ್ರಪ್ರಭ ಕಠಾರಿಯವರು ಕೃತಿಯಲ್ಲಿ ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬೇಕಾಗುತ್ತದೆ. ಮಾನವತೆಯು ಮಸಣ ಸೇರುವ ಹೊತ್ತಿನಲ್ಲಿ ಮಾತನಾಡುವುದೇ ಕಷ್ಟವಾಗಿದೆ. ಇಂದಿಗೆ ಬಹುದೊಡ್ಡ ವಿಡಂಬನಾತ್ಮಕ ಬರಹವೆಂದರೆ ಬಿಜೆಪಿಯ ಪ್ರಣಾಳಿಕೆಯೇ ಆಗಿದೆ ಎಂದರು.

ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತೇವೆ, ಎಲೆಕ್ಟೋರಲ್ ಬಾಂಡ್ ಮೂಲಕ ಪಾರದರ್ಶಕತೆ ತಂದಿದ್ದೇವೆ ಎನ್ನುತ್ತಾರೆ. ಆದರೆ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್‍ನಲ್ಲಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅಭಿವ್ಯಕ್ತಿಯ ನಂತರ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಭೀಮಾ ಕೋರೆಂಗಾವ್, ಉಮರ್ ಖಾಲಿದ್, ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ ಪ್ರಕರಣಗಳು ನಮ್ಮ ಮುಂದಿವೆ ಎಂದು ನೆನೆಪಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, ನಮ್ಮ ಗಾಯಗಳನ್ನು ನೆನಪಿಸುವ ಕೆಲಸವನ್ನು ತುಸು ಗಡುಸಾಗಿ, ಮುಖಕ್ಕೆ ಹೊಡೆದಂತೆ ಕಠಾರಿಯವರು ಬರೆದಿದ್ದಾರೆ. ವಿಚ್ಛಿದ್ರಕಾರಿ ಶಕ್ತಿಗಳು ನಮ್ಮ ಸುತ್ತ ಕುಣಿದಾಡುವಾಗ ನಾವು ಒರಟಾಗುವುದು ಸಾಮಾನ್ಯ. ಹೀಗಾಗಿ ಇಲ್ಲಿನ ಭಾಷೆಯೂ ಕಟುವಾಗಿದೆ ಎಂದು ಹೇಳಿದರು.

ಬೊಮ್ಮಾಯಿ ಅವಧಿಯಲ್ಲಿನ ಘಟನೆಗಳ ಕುರಿತು ಕೃತಿಯಲ್ಲಿ ವಿಡಂಬನೆಗಳಿವೆ. ಹಿಜಾಬ್, ಹಲಾಲ್, ಹಿಂದೂ- ಮುಸ್ಲಿಂ ಹುಡುಗರ ಕೊಲೆ, ದೇವಸ್ಥಾನದ ಬಳಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಮಾಡಿದ ಅಟ್ಟಹಾಸ, ಪಠ್ಯಪುಸ್ತಕಗಳ ಕೇಸರೀಕರಣ, ಅದಕ್ಕೆ ನಾಡಿನ ಪ್ರತಿರೋಧ, ಮುಸ್ಲಿಂ ಬಡಪಾಯಿಯ ಕಲ್ಲಂಗಡಿಯನ್ನು ಛಿದ್ರ ಮಾಡಿದ ಘಟನೆ, ಹಿಂದಿ ಭಾಷೆಯ ಹೇರಿಕೆ ಕುರಿತಾದ ಲೇಖನಗಳು ಕೃತಿಯಲ್ಲಿವೆ ಎಂದರು.

ಕೊರೊನ ಸಂದರ್ಭದಲ್ಲೂ ನಿಲ್ಲದ ಮುಸ್ಲಿಂ ದ್ವೇಷ ಮತ್ತು ಮುಸ್ಲಿಂ ಸಮುದಾಯ ಮಾಡಿದ ಅಂತ್ಯಸಂಸ್ಕಾರಗಳು, ದೇಶಭಕ್ತಿಯ ಹುಸಿ ತೋರ್ಪಡಿಕೆ, ಇನ್‍ಸ್ಟಾಲ್‍ಮೆಂಟ್‍ನಲ್ಲಿ ಜನರ ಭಾವನೆಗಳ ಜೊತೆ ಆಟ, ಅಗ್ನಿಪಥ್ ಹೆಸರಲ್ಲಿ ಯುವಕರಿಗೆ ವಂಚನೆ, ಚೌಕಿದಾರನ ಅಸಲಿ ಮುಖ, ಎರಡಾಣೆ ಭಕ್ತರ ಬೈಗುಳ, ಆರೆಸ್ಸೆಸ್ ಆಳಅಗಲ ಕೃತಿ ಉಂಟು ಮಾಡಿದ ಸಂಚಲನ ಕೃತಿಯಲ್ಲಿ ವಿವರಿಸಲಾಗಿದೆ ಎಂದು ಅವರು ತಿಳಿಸಿದರು.

ಪತ್ರಕರ್ತರ ಸೋಗಿನ ಭಕ್ತಪಡೆ, ತಿನ್ನುವ ಅನ್ನದಲ್ಲಿ ರಾಜಕಾರಣ, ಅಪೌಷ್ಟಿಕತೆ ನಿವಾರಣೆಗೆ ಮಕ್ಕಳಿಗೆ ಮೊಟ್ಟೆ ಕೊಡಬೇಕೆಂದರೂ ವಿವಾದ, ದೇವರು, ಧರ್ಮದ ಹೆಸರಲ್ಲಿ ಮಿತಿಮೀರಿದ ರಾಜಕಾರಣ, ಬಿಜೆಪಿ ಸೃಷ್ಟಿಸಿದ ಅರ್ಬನ್ ನಕ್ಸಲ್, ಆಂದೋಲನ ಜೀವಿ ಥರದ ಕೆಟ್ಟ ಪದಗಳು ಹೀಗೆ ಲೇಖನಗಳು ಕೋಮುವಾದದ ಬೇರೆ ಬೇರೆ ಎಳೆಗಳನ್ನು ವಿಡಂಬನೆ ಮಾಡುತ್ತಾ ಸಾಗುತ್ತವೆ ಎಂದು ಅವರು ವಿಶ್ಲೇಷಿಸಿದರು.

ಕೃತಿಯ ಲೇಖಕ ಚಂದ್ರಪ್ರಭ ಮಾತನಾಡಿ, ವಾಟ್ಸಾಪ್ ಗ್ರೂಪೊಂದರಲ್ಲಿ ಪತ್ರಕರ್ತ ಮಿತ್ರರೊಬ್ಬರು ‘ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಲೇಖನವೊಂದನ್ನು ಹಾಕಿದ್ದರು. ನೀವು ಪ್ರಕಟಿಸಿರುವ ಲೇಖನ ಹುಸಿ ವಿಚಾರಗಳಿಂದ ಕೂಡಿದೆ ಎಂದಾಗ ನೀವೊಂದು ಪ್ರತಿಕ್ರಿಯೆ ಬರೆಯಿರಿ ಎಂದರು. ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿನ ಸುಳ್ಳುಗಳನ್ನು ಬಯಲು ಮಾಡಿ ಬರೆದಾಗ ಲೇಖನ ಪ್ರಕಟಿಸಲಿಲ್ಲ. ಇದನ್ನು ಗಮನಿಸಿದ ಮಿತ್ರ ಹನುಮಂತ ಹಾಲಗೇರಿ ಲೇಖನವನ್ನು ತಮ್ಮ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದರು. ನಿರಂತರ ಬರೆಯಲು ಕೋರಿದರು. ಹಾಗೆ ಶುರುವಾಗಿ ಮೂಡಿಬಂದ ವಿಡಂಬನೆಗಳು ಇಂದು ಪುಸ್ತಕವಾಗಿ ನಿಮ್ಮ ಮುಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬರಹಗಾರರಾದ ನಾಗರಾಜ್ ಶೆಟ್ಟಿ ಮಾತನಾಡಿ, ಕಠಾರಿಯವರ ಬರಹದಲ್ಲಿ ಮೊಣಚಿದೆ, ಆಕ್ರೋಶವಿದೆ, ಆದರೆ ದ್ವೇಷವಿಲ್ಲ. ಮನೆಯ ಯಜಮಾನ, ತನ್ನ ಮನೆಯನ್ನು ಸರಿಪಡಿಸಲು ತಾಳುವ ಸಿಟ್ಟಿನಂತೆ ಇಲ್ಲಿನ ಬರಹಗಳಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ, ಬರಹಗಾರ ಜಿ.ಎನ್.ಮೋಹನ್, ನಾಗೇಗೌಡ ಕೀಲಾರ, ಹೋರಾಟಗಾರ ಎಚ್.ಸಿ.ಉಮೇಶ್, ಚಿಕ್ಕು ಕ್ರಿಯೇಷನ್ಸ್ ಪ್ರಕಾಶಕರಾದ ಸುಷ್ಮಾ ಕಠಾರಿ ಸೇರಿದಂತೆ ಮತ್ತಿತರರು ಇದ್ದರು. ಮಹಾಲಕ್ಷ್ಮಿ ಸ್ವಾಗತಿಸಿದರು, ಡಾ. ಪ್ರತಿಮಾ ವಿಜಯ್ ನಿರೂಪಣೆ ಮಾಡಿದರು, ಯುವರಾಜ್ ವಂದನಾರ್ಪಣೆ ನೆರವೇರಿಸಿದರು.

‘ಕಠಾರಿಯವರ ಬರಹ ಮುಖ್ಯವಾಗಿ ಕೋಮುವಾದದ ಬಗ್ಗೆ ಮಾತನಾಡುತ್ತದೆ. ಫ್ಯಾಸಿಸಂ ಬಗ್ಗೆ ಅವರು ಆತಂಕಗೊಂಡಿದ್ದಾರೆ. ಅವರು ಜಾತಿಯನ್ನು ಮರೆತಿದ್ದಾರೆ ಎಂದಲ್ಲ, ಕೋಮುವಾದವನ್ನು ನಾವು ಮಾತನಾಡುತ್ತಿದ್ದೇವೆ ಎಂದರೆ ಒಂದಲ್ಲ ಒಂದು ರೀತಿ ಸಮತಾ ಸಮಾಜ, ಅಸ್ಪೃಶ್ಯ ಮುಕ್ತ ಸಮಾಜದ ಬಗ್ಗೆ ಮಾತನಾಡುತ್ತಿದ್ದೇವೆ ಎಂದೇ ಅರ್ಥ. ಹಿಂದುತ್ವ ರಾಜಕಾರಣದ ಮೊದಲ ಮತ್ತು ಕೊನೆಯ ಅಜೆಂಡಾ ಶ್ರೇಣೀಕೃತ ಜಾತಿ ವ್ಯವಸ್ಥೆಯೇ ಆಗಿರುತ್ತದೆ. ಹಿಂದುತ್ವವು ತೊಗಲಿನಲ್ಲಿ ಮುಸ್ಲಿಂ ದ್ವೇಷವನ್ನು ಹೊಂದಿದ್ದರೆ, ರಕ್ತ ಮಾಂಸವೆಲ್ಲ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತದೆ’

-ಯತಿರಾಜ್ ಬ್ಯಾಲಹಳ್ಳಿ, ಯುವ ಪತ್ರಕರ್ತ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News