ಸಂಘ ಪರಿವಾರದವರು ವ್ಯಸನಿಗಳು, ವಿಕೃತ ಮನಸ್ಸಿನವರು : ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

Update: 2024-12-22 14:27 GMT

ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಸಂಘ ಪರಿವಾರದವರು ವ್ಯಸನಿಗಳು, ವಿಕೃತ ಮನಸ್ಸಿನವರು. ಮಹಾತ್ಮ ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಎಷ್ಟು ಅಪ್ರಪ್ರಚಾರ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ‘ಡ್ರಗ್ ಅಡಿಕ್ಟ್‌’ ಆಗಿದ್ದರೆ 10 ಸಾವಿರ ಕಿ.ಮೀ. ಪಾದಯಾತ್ರೆ ಮಾಡಲು ಆಗುತ್ತಿರಲಿಲ್ಲ. ನೆಹರು, ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಆಯಿತು. ಈಗ ಅಂಬೇಡ್ಕರ್ ಅವರನ್ನು ಸಂಘಪರಿವಾರದವರು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.

ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಹಳ ಯೋಚನೆ ಮಾಡಿ, ಲೆಕ್ಕಾಚಾರ ಹಾಕಿಯೇ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದು ಅವರ ಬಾಯಿ ತಪ್ಪಿನಿಂದ ಬಂದಂತಹ ಹೇಳಿಕೆಯಲ್ಲ. ಬಿಜೆಪಿ ಮೇಲ್ವರ್ಗದವರ ಪಕ್ಷ. ಅವರು ಕೆಳ ವರ್ಗದವರು, ಶೂದ್ರರು, ಅತೀ ಶೂದ್ರರು, ಅಲ್ಪಸಂಖ್ಯಾತರು, ಆದಿವಾಸಿಗಳನ್ನು ಗುಲಾಮರನ್ನಾಗಿ ನೋಡಲು ಇಚ್ಛಿಸುತ್ತಾರೆಯೇ ಹೊರತು, ನಾಯಕತ್ವ ನೀಡಲು ಮನಸ್ಸು ಮಾಡುವುದಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ನೀಡಿದ ಹೇಳಿಕೆ ಸಂಬಂಧ ಚರ್ಚೆ ನಡೆಸಲು ನಮಗೆ ಅವಕಾಶ ಕೋರಿ ಸಭಾಪತಿಗೆ ಮನವಿ ಮಾಡಲಾಗಿತ್ತು. ಆದರೆ, ನಮ್ಮ ಚರ್ಚೆಗೆ ಅವಕಾಶ ಇಲ್ಲದಂತೆ ಮಾಡಲು ಬಿಜೆಪಿಯವರು ಸದನದಲ್ಲಿ ಗದ್ದಲ ಎಬ್ಬಿಸಿದರು. ಹಿರಿಯರ ಸದನವಾಗಿರುವ ವಿಧಾನಪರಿಷತ್ತಿನಲ್ಲಿ ಇಂತಹ ಘಟನೆ ಆಗಬಾರದಿತ್ತು. ಭವಿಷ್ಯದಲ್ಲಿ ಮರುಕಳಿಸದಂತೆ ನಾವು ಎಚ್ಚರವಹಿಸಬೇಕು ಎಂದು ಅವರು ಹೇಳಿದರು.

ಸಿ.ಟಿ.ರವಿಯನ್ನು ಎನ್‍ಕೌಂಟರ್ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ, ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಪ್ರಹ್ಲಾದ್ ಜೋಶಿ ಅಮಿತ್ ಶಾ ಸಂತತಿಯವರು. ದೇಶದಲ್ಲಿ ನಕಲಿ ಎನ್‍ಕೌಂಟರ್‌ಗಳಿಗೆ ಹೆಸರುವಾಸಿಯಾದ ಅಮಿತ್ ಶಾರನ್ನು ಸುಪ್ರೀಂಕೋರ್ಟ್ ಗುಜರಾತ್‍ನಿಂದ ಗಡಿಪಾರು ಮಾಡಿತ್ತು. ಆದುದರಿಂದ, ಅಮಿತ್ ಶಾ ಹೇಳಿಕೊಟ್ಟ ಪಾಠವನ್ನು ಪ್ರಹ್ಲಾದ್ ಜೋಶಿ ಕೇಳಿಕೊಂಡು ಬಂದು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಅಂಬೇಡ್ಕರ್‌ ರನ್ನು ಅವಮಾನ ಮಾಡಿದ ಅಮಿತ್ ಶಾ ದೇಶದ ಕ್ಷಮೆಯಾಚಿಸಬೇಕು. ಹಿಂದೂ ರಾಷ್ಟ್ರದ ಪ್ರತಿಪಾದಕರಾಗಿದ್ದ ಗೋಳ್ವಾಲ್ಕರ್ ಹಾಗೂ ಸಾವರ್ಕರ್ ಎಂದಿಗೂ ಸಂವಿಧಾನ ಹಾಗೂ ತ್ರಿವರ್ಣ ಧ್ವಜವನ್ನು ಒಪ್ಪಿರಲಿಲ್ಲ. ಮೀಸಲಾತಿಯನ್ನು ವಿರೋಧಿಸಿದ್ದರು. ಇವರ ಕಚೇರಿಗಳ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸಿರಲಿಲ್ಲ ಎಂದು ಅವರು ಕಿಡಿಗಾರಿದರು.

ಆರೆಸ್ಸೆಸ್ ಸಂಘಟನೆಗೆ 100 ವರ್ಷ ತುಂಬುತ್ತಿರುವುದರಿಂದ ಅವರು ತಮ್ಮ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದ್ದಾರೆ. ಅದಕ್ಕಾಗಿ, ಏನಾದರೂ ಮಾಡಬೇಕು ಎಂಬ ಹುನ್ನಾರ ನಡೆಸುತ್ತಿದ್ದಾರೆ. ದೇಶದಲ್ಲಿ ಜಾತಿ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ಮಾಡುತ್ತಿರುವ ಆಗ್ರಹಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ಅಂಬೇಡ್ಕರ್ ಕುರಿತು ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ, ಈಗಾಗಲೇ ಹಲವೆಡೆ ಪ್ರತಿಭಟನೆಗಳನ್ನು ನಡೆಸಲಾಗಿದೆ. ನಾಳೆಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹರಿಪ್ರಸಾದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ರಾಮಚಂದ್ರಪ್ಪ ಹಾಗೂ ಜಯರಾಂ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News