ಚಾಮರಾಜನಗರ | ಕೊಳ್ಳೇಗಾಲ ಸರಕಾರಿ ಆಸ್ಪತ್ರೆ ವೈದ್ಯೆ ಅನುಮಾನಾಸ್ಪದ ಸಾವು

Update: 2023-09-29 12:06 GMT

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ನಗರದ ಸರಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯೆ ಡಾ. ಸಿಂಧುಜಾ (28) ಶುಕ್ರವಾರ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಶುಕ್ರವಾರ ವರದಿಯಾಗಿದೆ.

ತಮಿಳುನಾಡಿನ ಚೆನ್ನೈನವರಾದ ಸಿಂಧುಜಾ ಅವರ ಊರಿನಲ್ಲಿ ಎಂಬಿಬಿಎಸ್ ಕೋರ್ಸ್ ಮಾಡಿದ್ದರು. ಆ ಬಳಿಕ ಸ್ನಾತಕೋತ್ತರ ಪದವಿಗೆ ಸೇರಿದ್ದರು. ಸ್ನಾತಕೋತ್ತರ ಪದವಿ ಶಿಕ್ಷಣದ ಭಾಗವಾಗಿ ಅವರು ನಗರದ ಆಸ್ಪತ್ರೆಯಲ್ಲಿ ಅರಿವಳಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪವಿರುವ ಬಾಡಿಗೆ ಮನೆಯಲ್ಲಿ ವರ್ಷದಿಂದ ವಾಸವಿದ್ದರು ಎಂದು ಹೇಳಲಾಗಿದೆ.

ಸಿಂಧುಜಾ, ಗುರುವಾರ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಿದ್ದರು. ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಾರದ ಕಾರಣ ವೈದ್ಯೆ ಲೋಕೇಶ್ವರಿ, ಅವರು ಮೊಬೈಲ್ ಗೆ ಕರೆ ಮಾಡಿದ್ದಾರೆ. ಸಿಂಧೂಜಾ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ವೈದ್ಯರು ಹಾಗೂ ಸಿಬ್ಬಂದಿ ಮನೆಗೆ ಹೋಗಿದ್ದಾರೆ. ಕೂಗಿದರೂ ಬಾಗಿಲು ತೆರೆಯಲಿಲ್ಲ. ನಂತರ ಸಿಬ್ಬಂದಿ ಮನೆಯ ಕಿಟಕಿ ಗಾಜನ್ನು ಒಡೆದು ನೋಡಿದಾಗ ಡಾ.ಸಿಂಧುಜಾ ನೆಲದ ಮೇಲೆ ಬಿದ್ದಿದ್ದರು. ಪಕ್ಕದಲ್ಲಿ ಸಿರಿಂಜ್, ಔಷಧಿ, ಚಾಕು ಇನ್ನಿತರ ವಸ್ತುಗಳು ಇದ್ದವು ಎಂದು ತಿಳಿದು ಬಂದಿದೆ.

2024ರ ಜನವರಿ 2ರಂದು ಮದುವೆ ನಿಶ್ಚಯವಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದರು. ವಿಷಯ ತಿಳಿದ ಡಿವೈಎಸ್ಪಿ ಸೋಮೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News