ರಾಜ್ಯದಲ್ಲಿ ಜು.28 ರವರೆಗೆ ಮಳೆ ಸಾಧ್ಯತೆ; ಪರಿಹಾರಕ್ಕೆ ಹಣದ ಕೊರತೆ ಇಲ್ಲ: ಕಂದಾಯ ಸಚಿವ ಕೃಷ್ಣಬೈರೇಗೌಡ

Update: 2023-07-25 14:33 GMT

ಮಡಿಕೇರಿ ಜು.25 : ರಾಜ್ಯದ ವಿವಿಧೆಡೆ ಜು.28 ರವರೆಗೆ ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಧಿಕಾರಿಗಳು ಪ್ರತಿಕ್ಷಣ ಸನ್ನದ್ಧರಾಗಿರಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇ ಗೌಡ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ವಾರದಿಂದ ರಾಜ್ಯವ್ಯಾಪಿ ಉತ್ತಮ ಮಳೆಯಾಗಿದೆ. ರಾಜ್ಯದ ನಾಲ್ಕು ಜಲಾಶಯಗಳು ಶೇ.50 ರಷ್ಟು ಭರ್ತಿಯಾಗಿವೆ. ಅತಿಮಳೆಯಿಂದ ದೊಡ್ಡ ಪ್ರಮಾಣದ ಹಾನಿಯಾಗದಿದ್ದರೂ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಮತ್ತು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದರು.

ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಳೆಹಾನಿ ಪರಿಹಾರ ಕೋರಿ ಮನವಿ ಸಲ್ಲಿಸಿದರೆ ಹಣ ನೀಡಲು ಸರ್ಕಾರ ಸಿದ್ಧವಿದೆ. ಪರಿಹಾರ ನೀಡಲು ಹಣದ ಕೊರತೆಯಿಲ್ಲ. ರಾಜ್ಯವ್ಯಾಪಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಮಳೆಹಾನಿ ಪರಿಹಾರದ ಹಣ ಒಟ್ಟು 540 ಕೋಟಿ ರೂ.ಗಳಿದೆ ಎಂದು ತಿಳಿಸಿದರು.

'' ಉಳಿಕೆ ಸರಿಯಲ್ಲ ''

ಕೊಡಗು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕಳೆದ ವರ್ಷದ ಮಳೆಹಾನಿ ಪರಿಹಾರದ ಹಣ 56 ಕೋಟಿಯಷ್ಟು ಬಾಕಿ ಉಳಿದಿದೆ. ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಕಾಮಗಾರಿಗಳಿಗೆ ವಿನಿಯೋಗಿಸಿ ಸದ್ಬಳಕೆ ಮಾಡದೆ ಉಳಿಸಿಕೊಂಡಿರುವುದು ಸರಿಯಲ್ಲ. ಮಳೆಹಾನಿ ಕಾಮಗಾರಿ ಇಲ್ಲದಿದ್ದಲ್ಲಿ ಪ್ರಸ್ತಾವನೆಯಲ್ಲಿರುವ ಕಾಮಗಾರಿಯನ್ನು ರದ್ದುಗೊಳಿಸಬೇಕು, ತಪ್ಪಿದಲ್ಲಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಉಳಿಕೆಯಾಗಿರುವ ಹಣವನ್ನು ಈ ಬಾರಿಯ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಮೇಲೆ ವಿನಿಯೋಗಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಸಚಿವ ಕೃಷ್ಣಬೈರೇ ಗೌಡ ಹೇಳಿದರು.

''15 ರಿಂದ 20 ಕೋಟಿ''

2018 ರಿಂದ ಭೂಕುಸಿತವಾಗುತ್ತಲೇ ಇರುವ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಇಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲು ಭೂವಿಜ್ಞಾನಿಗಳಿಂದ ವರದಿ ಪಡೆಯಬೇಕು. ನಂತರ ಪ್ರಸ್ತಾವನೆ ಸಲ್ಲಿಸಿದರೆ ಕಾಮಗಾರಿಗೆ ಕಂದಾಯ ಇಲಾಖೆಯಿಂದ 15 ರಿಂದ 20 ಕೋಟಿ ರೂ. ನೀಡಲು ಸಿದ್ಧ ಇರುವುದಾಗಿ ಸಚಿವರು ಭರವಸೆ ನೀಡಿದರು.

ಮಳೆಯಿಂದಾಗುವ ಹಾನಿಗೆ ಬೇಕಾದ ಪರಿಹಾರವನ್ನು ನೀಡಲು ಸರ್ಕಾರ ಸಿದ್ಧವಿದೆ, ಹಣದ ಕೊರತೆಯಿಲ್ಲ. ಆದರೆ ಅಧಿಕಾರಿಗಳು ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಎನ್‍ಡಿಆರ್‍ಎಫ್ ತಂಡಗಳು, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಳೆ ಸಂಬಂಧಿತ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿದ್ಯುತ್ ಮಾರ್ಗದ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿದೆ ಎಂದು ಅಧಿಕಾರಿಗಳು ಮನವಿ ಮಾಡಿದ್ದು, ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಒದಗಿಸುವುದಾಗಿ ಕೃಷ್ಣಬೈರೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News