ಎರಡು ಬಾರಿ ಅಧಿಕಾರ ಮಾಡಿರುವ ನೀವು ಜನರ ಆಶೀರ್ವಾದದಿಂದ ಗೆದ್ದಿದ್ದೀರೇ? : ಬಿಜೆಪಿಗೆ ಸಿಎಂ ಪ್ರಶ್ನೆ

ಬೆಂಗಳೂರು : ಎರಡು ಬಾರಿ ಅಧಿಕಾರ ಮಾಡಿರುವ ನೀವು ಜನರ ಆಶೀರ್ವಾದದಿಂದ ಗೆದ್ದಿದ್ದೀರೇ? ಆಪರೇಶನ್ ಕಮಲ ಮಾಡಿ 18 ಕ್ಷೇತ್ರಗಳನ್ನು ಗೆದ್ದಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯನ್ನು ಟೀಕಿಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಲಾಗಿತ್ತು. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಜನ ಶಕ್ತಿ ಯೋಜನೆಯಡಿ ಓಡಾಡಿದ್ದಾರೆ ಎಂದು ಸಿಎಂ ತಿಳಿಸಿದರು.
ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಮೂರೂ ಕಡೆ ಬಿಜೆಪಿ ಮಕಾಡೆ ಮಲಗಿದೆ. ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ ಎಂದರು.
ಬಸವರಾಜ ಬೊಮ್ಮಾಯಿ ಅವರ ಮಗನ ವಿರುದ್ಧ ಗೆಲ್ಲಬೇಕಾದರೆ ಎಲ್ಲಾ ಜಾತಿ ಜನರು ಮತ ನೀಡಿದ್ದರಿಂದ ನಾವು ಗೆದ್ದಿದ್ದೇವೆ. ನಾವು ಅಪರೇಶನ್ ಕಾಂಗ್ರೆಸ್ ಮಾಡಿಲ್ಲ. ನಾವು ಗ್ಯಾರಂಟಿ ಕೊಡದೇ ಹೋಗಿದ್ದರೆ ಬಡವರು ಮತ ಹಾಕುತ್ತಿರಲಿಲ್ಲ . ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವ ಈ ಯೋಜನೆಗಳು ಬಡವರ ಬದುಕಿಗೆ ಭರವಸೆ ನೀಡಿವೆ ಎಂದು ಹೇಳಿದರು.