ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿರುವುದು ಅಪಾಯಕಾರಿ : ಸಿಎಂ ಸಿದ್ದರಾಮಯ್ಯ

Update: 2025-01-12 16:00 GMT

ಬೆಂಗಳೂರು : ಇಂದು ಊಹಾ ಪತ್ರಿಕೋದ್ಯಮ ವ್ಯಾಪಕವಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಮನಸಾಕ್ಷಿಗೆ ತಕ್ಕಂತೆ ಮಾಧ್ಯಮಗಳು ವರದಿ ಮಾಡಿದರೆ ಸಮಾಜಕ್ಕೆ ಅದಕ್ಕಿಂತ ದೊಡ್ಡ ಸೇವೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಇಲ್ಲಿನ ಪ್ರಸ್‍ಕ್ಲಬ್‍ನಲ್ಲಿ ನಡೆದ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ನೀಡುವ 2024ನೇ ಸಾಲಿನ ವರ್ಷದ ವ್ಯಕ್ತಿ, ವಿಶೇಷ ಪ್ರಶಸ್ತಿ, ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಸುದ್ದಿಗಳನ್ನು ವೈಭವೀಕರಿಸಬಾರದು, ಮೂಡ ನಂಬಿಕೆಗಳನ್ನೂ ಬೆಂಬಲಿಸಬಾರದು ಎಂದರು.

ನಾನು ಇವತ್ತಿನವರೆಗೂ ಯಾವ ಮಾಧ್ಯಮದವರಿಗೂ ಏಕೆ ಹೀಗೆ ಬರಿದಿದ್ದೀರಾ ಎಂದು ಕೇಳಿಲ್ಲ. ಮಾಧ್ಯಮಗಳು ಜನರ ಧ್ವನಿಯಾಗಿ ಕೆಲಸ ಮಡಬೇಕು. ಸಾಧ್ಯವಾದರೆ ಸತ್ಯ ಬರೆಯುವುದಕ್ಕೆ ಪ್ರಯತ್ನಿಸಬೇಕು. ನಾವು ಜನಪರ ಕೆಲಸ ಮಾಡದಿದ್ದಾಗ, ಕೊಟ್ಟ ಮಾತು ಈಡೇರಿಸದಿದ್ದಾಗ ಅದನ್ನು ಬರೆದು ಜನರ ಕಣ್ಣು ತೆರೆಸುವ ಹಕ್ಕು ಜವಾಬ್ದಾರಿ ಮಾಧ್ಯಮದವರ ಮೇಲಿದೆ. ಅದನ್ನು ನಿಭಾಯಿಸಿ ಎಂದು ಕರೆ ನೀಡಿದರು.

ನನ್ನ ಕಾರು ಮೇಲೆ ಕಾಗೆ ಕುಳಿತಿದ್ದಕ್ಕೆ ಜ್ಯೋತಿಷಿಗಳನ್ನು ಚಾನಲ್‍ಗಳಿಗೆ ಕರೆಸಿ ಏನೆಲ್ಲಾ ಹೇಳಿಸಿದ್ದೀರಿ, ನಾನು 5 ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸಲ್ಲ ಎಂದು ತೋರಿಸಿದ್ದೀರಿ, ಆದರೆ ನಾನು ಐದು ವರ್ಷ ಪೂರೈಸಿ ಎರಡನೆ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಈ ರೀತಿಯ ಕಾಗೆ ಸುದ್ದಿಯಿಂದ ಮಾಧ್ಯಮಗಳ ವಿಶ್ವಾಸಾರ್ಹತೆ ಕಡಿಮೆ ಆಗಿದೆಯೋ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಎಲ್ಲ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ. ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಟೀಕೆ ಮಾಡಿದರೆ, ನಾನು ಅದಕ್ಕೆ ಮನ್ನಣೆ ನೀಡುವುದಿಲ್ಲ. ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಜನಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಬುದ್ದ, ಬಸವ, ಅಂಬೇಡ್ಕರ್ ಹೇಳಿದ ಸಮ ಸಮಾಜದ ಆಶಯ ಈಡೇರಿಸುವ ದಿಕ್ಕಿನಲ್ಲಿ ವೃತ್ತಿಪರತೆ ನಿರ್ವಹಿಸಿದರೆ ಅದು ಸಮಾಜಕ್ಕೆ ಉಪಯೋಗವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪ್ರದಾನ ಮಾಡಲಾಯಿತು. ವಿಶೇಷ ಪ್ರಶಸ್ತಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ ಅವರಿಗೆ ನೀಡಲಾಯಿತು. ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ ಸೇರಿ ಐವರಿಗೆ ಪ್ರೆಸ್‍ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿ’ ನೀಡಲಾಯಿತು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಪ್ರಮುಖರಿದ್ದರು.

ವಾರ್ತಾಭಾರತಿ ಪತ್ರಿಕೆಯ ಬೆಂಗಳೂರು ಬ್ಯೂರೋನ ಮುಖ್ಯಸ್ಥ ಪ್ರಕಾಶ್ ಸಿ. ಸೇರಿ 50 ಮಂದಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಿಸಿ ಸನ್ಮಾನ ಮಾಡಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News