ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ಅನಾವಶ್ಯಕವಾಗಿ ಚರ್ಚೆ ಆಗುತ್ತಿದೆ ಅಷ್ಟೇ : ಎಚ್.ಸಿ.ಮಹದೇವಪ್ಪ
ಮೈಸೂರು : "ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ, ಅವರು ಮುಂದುವರೆಯುತ್ತಾರೆ. ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಕುರ್ಚಿಯ ಬಗ್ಗೆ ಯಾವ ಚರ್ಚೆಗಳು ಆಗಿಲ್ಲ. ಅನಾವಶ್ಯಕವಾಗಿ ಚರ್ಚೆ ಆಗುತ್ತಿದೆ ಅಷ್ಟೇʼ ಎಂದರು.
ʼಕಾಂಗ್ರೆಸ್‌ಗೆ ಹೈಕಮಾಂಡ್ ಬೆಂಬಲವಾಗಿ ನಿಂತಿದೆ. ಹೈಕಮಾಂಡ್ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿದೆ. ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ಸರಿ ಇದೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೇ ಅದೇ ಅಂತಿಮʼ ಎಂದು ಹೇಳಿದರು.
ʼಒಂದು ಕಡೆ ಸೇರಿ ಊಟ ಮಾಡುವುದು ಅಪರಾಧವೇ, ಟೀ ಕುಡಿಯಲು ಸೇರುವುದು ಗುಂಪುಗಾರಿಕಯೇ? ಆ ರೀತಿ ಕಾಂಗ್ರೆಸ್‌ನಲ್ಲಿ ಇಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲರೂ ಒಗಟ್ಟಾಗಿದ್ದೇವೆ. ಪರಮೇಶ್ವರ್ ಅವರು ಕರೆದಿದ್ದ ಡಿನ್ನರ್ ಸಭೆಗೆ ತಡೆಯಾಗಿಲ್ಲ. ಸುಜೇರ್ವಾಲಾ ನಾಳೆ ಬರುತ್ತಿದ್ದಾರೆ. ಚರ್ಚೆ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಡಿ.ಕೆ.ಶಿವಕುಮಾರ್ ಇದ್ದಾಗಲೂ ಡಿನ್ನರ್ ನಡೆದಿದೆ, ಇಲ್ಲದಿದ್ದಾಗಲೂ ನಡೆದಿದೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲʼ ಎಂದು ನುಡಿದರು.