ಮನ್ಮುಲ್ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ; ಮಂಡ್ಯದಲ್ಲಿ ಜೆಡಿಎಸ್ ಗೆ ಮತ್ತೆ ಮುಖಭಂಗ

Update: 2023-07-24 08:53 GMT

ಮಂಡ್ಯ, ಜು. 24: ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್ ಮುಲ್)ದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಜೆಡಿಎಸ್ ಮುಖಭಂಗ ಅನುಭವಿಸಿದೆ.

ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತ ಬೋರೇಗೌಡ ಅಲಂಕರಿಸುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ.

ಕಾಂಗ್ರೆಸ್ ಬೆಂಬಲಿತ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತ ನಿರ್ದೇಶಕ ಎಸ್ ಪಿ ಸ್ವಾಮಿ ಅವರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಜಾತ್ಯತೀತ ಜನತಾದಳಕ್ಕೆ ಮುಖ ಭಂಗವನ್ನುಂಟು ಮಾಡಿದೆ.

ಮೂವರು ಚುನಾಯಿತ ನಿರ್ದೇಶಕರು, ಓರ್ವ ನಾಮನಿರ್ದೇಶಕರು, ನಾಲ್ವರು ಅಧಿಕಾರಿ ಸೇರಿ 8 ಮತದ ಬಲವೊಂದಿದ್ದ ಕಾಂಗ್ರೆಸ್ ಗೆ ಬಿಜೆಪಿಯ ಸಾದೊಳಲು ಸ್ವಾಮಿ ಬೆಂಬಲ ನೀಡಿದ್ದರಿಂದ ಮನ್ ಮುಲ್ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಮನ್ ಮುಲ್ ನಲ್ಲಿ ಬಿ. ಆರ್. ರಾಮಚಂದ್ರ, ರಘುನಂದನ್, ವಿಶ್ವನಾಥ್, ನೆಲ್ಲಿಗೆರೆ ಬಾಲಕೃಷ್ಣ, ಕೋಟೆ ರವಿ, ಎಚ್ ಟಿ ಮಂಜು, ಕಾಡೇನಹಳ್ಳಿ ರಾಮಚಂದ್ರು ಜಾ.ದಳ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದು, ಯು. ಸಿ. ಶಿವಕುಮಾರ್, ಬೋರೇಗೌಡ ಮತ್ತು ಡಾಲು ರವಿ ಕಾಂಗ್ರೆಸ್ ಬೆಂಬಲಿತ ಚುನಾಯಿತ ನಿರ್ದೇಶಕರಾಗಿದ್ದರೆ, ಕದಲೂರು ರಾಮಕೃಷ್ಣ ನಾಮನಿರ್ದೇಶನ ನಿರ್ದೇಶಕರಾಗಿದ್ದಾರೆ. 12 ಚುನಾಯಿತ ನಿರ್ದೇಶಕರು ಮತ್ತು ನಾಲ್ವರು ಅಧಿಕಾರಿಗಳು ಮತದಾನದ ಹಕ್ಕು ಹೊಂದಿದ್ದರು.

ಅಧ್ಯಕ್ಷರ ಆಯ್ಕೆಗೆ ಕಳೆದ ಜು. 6 ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಾ.ದಳ ಬೆಂಬಲಿತ ರಘುನಂದನ್, ನೆಲ್ಲಿಗೆರೆ ಬಾಲು, ಶಾಸಕ ಎಚ್ ಟಿ ಮಂಜು ಹಾಗೂ ಕಾಂಗ್ರೆಸ್ ಬೆಂಬಲಿತ ಬೋರೇಗೌಡ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆ ಮಧ್ಯೆ ನಿರ್ದೇಶಕರಾದ ಬಿ. ಆರ್.ರಾಮಚಂದ್ರ ಮತ್ತು ವಿಶ್ವನಾಥ್ ಅವರನ್ನು ಸಹಕಾರ ಸಂಘಗಳ ಆಡಳಿತ ಮಂಡಳಿಯ ಸಭೆಯಲ್ಲಿ ಭಾಗವಹಿಸಲು

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಉಪ ವಿಭಾಗ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶಿಸಿತ್ತು.

ಚುನಾವಣೆ ಸಭೆಗೆ ಕೋರಂ ಅಭಾವ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಅಧ್ಯಕ್ಷರ ಚುನಾವಣೆಯನ್ನು ಮುಂದೂಡಿದ್ದರು.

ಮುಂದೂಡಿದ ಚುನಾವಣೆ ಸಭೆ ಸೋಮವಾರ (ಜು.24 ) ನಿಗದಿಯಾಗಿತ್ತು. ಸಭೆಯಲ್ಲಿ ಮತಕ್ಕೆ ಹಾಕಿದಾಗ ಕಾಂಗ್ರೆಸ್ ಬೆಂಬಲಿತ ಬೋರೇಗೌಡ 9 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿತ ಸದಸ್ಯ ಎಸ್ ಪಿ ಸ್ವಾಮಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದ ರಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಗೆ ವರದಾನವಾಯಿತು. ಜೆಡಿಎಸ್ ನಿರ್ದೇಶಕರು ಸಭೆಗೆ ಗೈರು ಆಗಿದ್ದರು.

ಮನ್ ಮುಲ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ನಾನಾ ತಂತ್ರಗಾರಿಕೆ ಮಾಡಿದ್ದ ಕಾಂಗ್ರೆಸ್ ಕೊನೆಗೂ ಯಶಸ್ವಿಯಾಗಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆಯುವುದು ಶತಸಿದ್ಧ ಎಂದು ಮುನ್ನೆಡೆದಿದ್ದ ಜಾತ್ಯತೀತ ಜನತಾದಳಕ್ಕೆ ಮುಖಭಂಗ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News