ಸಂವಿಧಾನವೇ ನನ್ನ ಧರ್ಮ: ಸ್ಪೀಕರ್ ಯು.ಟಿ ಖಾದರ್
ಹಾಸನ: ಸೆ, 9: ʻʻಸಂವಿಧಾನವೇ ನನ್ನ ಧರ್ಮ ,ಸಂವಿಧಾನವೇ ನನ್ನ ಪಕ್ಷ, ಇದಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತಿದ್ದೇನೆʻʻ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ನಗರದ ಎಂ ಹೆಚ್ ಹಾಲ್ ನಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼʼಸಭಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ನಾನು ರಾಜಕೀಯ ಪಕ್ಷಕ್ಕೆ ರಾಜೀನಾಮೆ ನೀಡಿ ಈ ಸ್ಥಾನವನ್ನು ಅಲಂಕರಿಸಿದ್ದೇನೆʼʼ ಎಂದು ತಿಳಿಸಿದರು.
ʼʼಸಂಸದೀಯ ವ್ಯವಸ್ಥೆ ಬಲಿಷ್ಠ ಗೊಂಡಾಗ ಮಾತ್ರ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ.ಸಂವಿಧಾನದ ನಿಯಮಗಳು ಬಲಿಷ್ಟಗೊಳ್ಳಬೇಕಾದರೆ, ಸಂಸದೀಯ ನಿಯಮಗಳಲ್ಲಿ ಅಚ್ಚುಕಟ್ಟಾಗಿ ಕೆಲಸಗಳು ನಡೆಯಬೇಕು. ಭಾರತದ ಸರ್ವಜನರು ಸಂತೋಷದಿಂದ ನೆಮ್ಮದಿಯಿಂದ ಜೀವನ ಮಾಡಬೇಕಾದರೆ, ಸಂವಿಧಾನ ಬದ್ಧ ಸರ್ಕಾರ ಬಂದಾಗ ಮಾತ್ರ ಸಾಧ್ಯವಾಗುತ್ತದೆʼʼ ಎಂದು ಅವರು ಹೇಳಿದರು.
ʼʼಯಾರೇ ಅಧಿಕಾರಕ್ಕೆ ಬಂದರೂ ಅವರು ಸಂವಿಧಾನದ ಮಾರ್ಗದರ್ಶನದಲ್ಲಿ ಅಧಿಕಾರ ನಡೆಸಿದರೆ. ಭಾರತ ಸದೃಢವಾಗುತ್ತದೆ ಹಾಗೂ ಈ ದೇಶದ ನಾಗರಿಕರು ನೆಮ್ಮದಿಯಿಂದ ಬದುಕಲು ಸಾಧ್ಯʼʼ ಎಂದರು.
ಅರಸೀಕೆರೆ ಕ್ಷೇತ್ರದ ಕೆ.ಎಂ. ಶಾಸಕ ಶಿವಲಿಂಗೇಗೌಡ ಮಾತನಾಡಿ, ʼʼಸ್ವತಂತ್ರ ಭಾರತದ ಇತಿಹಾಸದಲ್ಲಿ 75 ವರ್ಷಗಳ ಕಾಲ ಮಾಡದ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತ ವ್ಯಕ್ತಿಯನ್ನು ಸ್ಪೀಕರ್ ನ್ನಾಗಿ ಆಯ್ಕೆ ಮಾಡಿದ್ದಾರೆʼʼ ಎಂದರು.