ಕೌಶಲ್ಯ ತರಬೇತಿ ನೀಡದ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-01-18 16:32 GMT

ಬೆಂಗಳೂರು: ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯ ಸರಕಾರದಿಂದ ಆರ್ಥಿಕ ನೆರವು ಪಡೆದರೂ ಅಭ್ಯರ್ಥಿಗಳಿಗೆ ತರಬೇತಿ ನೀಡದ 8 ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೌಶಲ್ಯಭಿವೃದ್ದಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸೂಚನೆ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್‍ನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಡಿಪ್ಲೊಮಾ, ಐಐಟಿ ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸ್‍ಗಳಿಗೆ ತರಬೇತಿ ನೀಡಲು ಒಪ್ಪಂದ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿರುವ 8 ಕಂಪೆನಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ತಕ್ಷಣದಿಂದಲೇ ಅನ್ವಯವಾಗುವಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಮುಂದೆ ಇಂತಹ ಏಜೆನ್ಸಿಗಳಿಗೆ ತರಬೇತಿ ನೀಡುವ ಟೆಂಡರ್ ಗಳನ್ನು ನೀಡಬಾರದು ಎಂದು ತಾಕೀತು ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದ ಈ ಯೋಜನೆಯಡಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ವೃತ್ತಿಪರ ಕೋರ್ಸ್‍ಗಳಿಗೆ ತರಬೇತಿ ನೀಡಲು ಒಟ್ಟು 74.65 ಕೋಟಿ ರೂ. ಪಡೆದುಕೊಂಡಿದ್ದಾರೆ. ನಿಯಮಗಳನ್ನು ಪಾಲನೆ ಮಾಡದಿರುವವರಿಂದ ಬಡ್ಡಿ ಸಮೇತವಾಗಿ ವಸೂಲಿ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಲವರು ಅರ್ಹತೆ ಇಲ್ಲದಿದ್ದರೂ ತರಬೇತಿ ನೋಡುತ್ತೇವೆಂದು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಪುನರಾವರ್ತನೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದ ಅವರು, ಇನ್ನು ಮುಂದೆ ಅರ್ಹತೆ ಇರುವ ಕಂಪೆನಿಗಳೊಂದಿಗೆ ಮಾತ್ರ ತರಬೇತಿಗೆ ಒಪ್ಪಂದ ಮಾಡಿಕೊಳ್ಳಬೇಕು. ಅವರು ನಿಗದಿತ ಸಮಯದಲ್ಲಿ ನಾವು ನೀಡಿರುವ ಗುರಿ ತಲುಪಲೇಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ, ಅಂತಹವರನ್ನು ಕಪ್ಪುಪಟ್ಡಿಗೆ ಸೇರಿಸಲು ಹಿಂದೆ-ಮುಂದೆ ನೋಡಬೇಡಿ ಎಂದು ತಾಕೀತು ಮಾಡಿದರು.

‘ಇನ್ನು ಮುಂದೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ತರಬೇತಿ ಸಂಸ್ಥೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಕೆಳಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಖುದ್ದು ನಾನೆ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಉದಾಸೀನ ತೋರಿದರೆ, ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇನೆ’

ಶರಣ್ ಪ್ರಕಾಶ್ ಪಾಟೀಲ್ ಕೌಶಲ್ಯಾಭಿವೃದ್ಧಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News