'ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಬಹಿರಂಗ ಹೇಳಿಕೆಗೆ ಕಡಿವಾಣ ಹಾಕಿ': ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಿಯೋಗದಿಂದ ಡಿಕೆಶಿಗೆ ದೂರು

Update: 2023-11-10 11:10 GMT

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಅಸಮಾಧಾನ ಹೊರಹಾಕಿ ಪಕ್ಷಕ್ಕೆ ಮುಜುಗುರ ಉಂಟಾಗುವ ರೀತಿ ಹೇಳಿಕೆ‌‌ ನೀಡುತ್ತಿರುವ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಜಿಲ್ಲಾ‌ ಕಾಂಗ್ರೆಸ್ ನಿಯೋಗ ದೂರು ನೀಡಿದೆ.

ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ‌ ಮಾಡಿರುವ ನಿಯೋಗ,ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಸಮಾಧಾನದ ಹೇಳಿಕೆಯಿಂದ ರಾಜ್ಯಕ್ಕೆ ತಪ್ಪು ಸಂದೇಶ ಹೋಗುತ್ತಿದೆ. ಬಿಜೆಪಿಯ ಆಪರೇಷನ್ ಕಮಲಕ್ಕೆ ಇಂಬು ನೀಡುತ್ತಿದೆ.ಇದರಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ.ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆನ್ನಲಾಗಿದೆ.

ಮೊನ್ನೆಯಷ್ಟೇ ಪತ್ರಿಕಾಗೋಷ್ಟಿ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಅಸಮಾಧಾನ ಹೊರಹಾಕಿದ್ದು ಅಲ್ಲದೇ ಈ ಹಿಂದೆ ಮಧುಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು,ಈಗ ಯಾರಿದ್ದಾರೆಂಬ ಮಾಹಿತಿ ಇಲ್ಲ ಎಂದು ಬಹಿರಂಗ ಹೇಳಿಕೆ‌ ನೀಡಿದ್ದಾರೆ.ಇದು ಸರಿಯಲ್ಲ.ಸಚಿವರು ಸರ್ಕಾರದ ಒಂದು ಭಾಗವಾಗಿದ್ದಾರೆ.ಸರ್ಕಾರದ ವಿರುದ್ದವೇ ಈ ರೀತಿ ಹೇಳಿಕೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ‌ ಎಂದು ಉಪಮುಖ್ಯಮಂತ್ರಿ ಎದುರು ಜಿಲ್ಲಾ ಕಾಂಗ್ರೆಸ್ ನಿಯೋಗ ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇದೇ ರೀತಿ ಬಹಿರಂಗ ಹೇಳಿಕೆ ನೀಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಗಂಭೀರ ಪರಿಣಾಮ‌ ಬೀರಲಿದೆ.ಆದ್ದರಿಂದ ಅವರನ್ನು ಕರೆದು ಮಾತನಾಡಿ,ಬಹಿರಂಗ ಹೇಳಿಕೆ‌ ನೀಡದಂತೆ ತಾಕೀತು ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News