ದಿಲ್ಲಿ ಪೊಲೀಸರಿಂದ ಮಾನವ ಹಕ್ಕುಗಳ ಕಾರ್ಯಕರ್ತ ನದೀಮ್ ಖಾನ್ ರ ಅಕ್ರಮ ಬಂಧನಕ್ಕೆ ಯತ್ನ: ಆರೋಪ

Update: 2024-12-01 07:04 GMT

 ನದೀಮ್ ಖಾನ್ (en.wikipedia.org)

ಬೆಂಗಳೂರು: ಮಾನವ ಹಕ್ಕುಗಳ ಕಾರ್ಯಕರ್ತ, ನಾಗರಿಕ ಹಕ್ಕುಗಳ ರಕ್ಷಣಾ ಸಂಘದ (APCR) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಅಕ್ರಮ ಬಂಧನಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.

ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್ಎಚ್ಒ) ಸೇರಿದಂತೆ ನಾಲ್ವರು ಅಧಿಕಾರಿಗಳು, ವಾರೆಂಟ್ ಅಥವಾ ಯಾವುದೇ ಪೂರ್ವ ಸೂಚನೆ ಇಲ್ಲದೆ ನದೀಮ್ ಖಾನ್ ಅವರ ಸಹೋದರನ ಬೆಂಗಳೂರಿನ ನಿವಾಸಕ್ಕೆ ಆಗಮಿಸಿ ಅಕ್ರಮ ಬಂಧನಕ್ಕೆ ಯತ್ನಿಸಿದ್ದಲ್ಲದೆ, ದಬ್ಬಾಳಿಕೆ ನಡೆಸಿ ಬೆದರಿಕೆ ಹಾಕಿದ್ದಾರೆಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಆರೋಪಿಸಿದೆ.

ಈ ಕುರಿತು ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷರಾದ ಕವಿತಾ ಶ್ರೀವಾತ್ಸವ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ. ಸುರೇಶ್ ಪ್ರಕಟಣೆಯನ್ನು ಹೊರಡಿಸಿದ್ದಾರೆ. ನ.30ರಂದು ದಾಖಲಾದ ಎಫ್ಐಆರ್‌ ಗೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ನದೀಮ್ ಖಾನ್ಗೆ ದಿಲ್ಲಿ ಪೊಲೀಸರು ಒತ್ತಡ ಹೇರಿದ್ದಾರೆ. ಕೋಮುದ್ವೇಷ ಹರಡಿದ ಆರೋಪದಲ್ಲಿ ನದೀಮ್ ವಿರುದ್ಧ ದಿಲ್ಲಿಯಲ್ಲಿ ನ.30ರಂದು ಮಧ್ಯಾಹ್ನ 12:48ಕ್ಕೆ ಪ್ರಕರಣ ದಾಖಲಿಸಲಾಗಿದೆ. ವಾರೆಂಟ್ ಇಲ್ಲದೆ ಪೊಲೀಸರು ಸುಮಾರು ಆರು ಗಂಟೆಗಳ ಕಾಲ ನದೀಮ್ ಅವರ ಸಹೋದರನ ಮನೆಯಲ್ಲಿದ್ದರು. ಪೊಲೀಸರು ಖಾನ್ ಅವರ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ. ನೋಟಿಸ್ ಮತ್ತು ವಾರೆಂಟ್ ಬಗ್ಗೆ ಕೇಳಿದಾಗ ತಬ್ಬಿಬ್ಬಾದ ಅಧಿಕಾರಿಗಳು ಕೊನೆಗೆ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ ಎಂದು ಪಿಯುಸಿಎಲ್ ಹೇಳಿದೆ.

ಈ ಘಟನೆಯು ನಾಗರಿಕ ಹಕ್ಕುಗಳ ರಕ್ಷಣಾ ಸಂಘದ ಸದಸ್ಯರನ್ನು ಗುರಿಯಾಗಿಸುವ ಪೊಲೀಸರ ಕ್ರಮದ ಮುಂದುವರಿದ ಭಾಗವಾಗಿದೆ. ನವೆಂಬರ್ 29ರಂದು ಸುಮಾರು 20-25 ಪೊಲೀಸ್ ಅಧಿಕಾರಿಗಳು ದಿಲ್ಲಿಯ ಎಪಿಸಿಆರ್ ಕಚೇರಿಗೆ ಭೇಟಿ ನೀಡಿ ನದೀಮ್ ಬಗ್ಗೆ ವಿಚಾರಿಸಿದ್ದಾರೆ. ಕಚೇರಿಯಲ್ಲಿ ಹಾಜರಿದ್ದ ವಕೀಲರಿಗೆ ತನಿಖೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಪೋಲಿಸ್ ದೌರ್ಜನ್ಯಗಳು ಮತ್ತು ಗುಂಪು ಹಿಂಸಾಚಾರದ ಬಗ್ಗೆ ನದೀಮ್ ಖಾನ್ ಮಾತನಾಡಿದಾಗ ಸಾಮಾಜಿಕ ಮಾಧ್ಯಮದಲ್ಲಿ ಬಲಪಂಥೀಯರು ಅವರನ್ನು ಹಲವು ಬಾರಿ ಗುರಿ ಮಾಡಿದ್ದಾರೆ.

ದ್ವೇಷದ ಅಪರಾಧಗಳ ಘಟನೆಗಳು ಮತ್ತು ಗುಂಪು ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಗಮನ ಸೆಳೆಯುವ ಉದ್ದೇಶದಿಂದ ಖಾನ್ ಆಯೋಜಿಸಿದ್ದ ವಸ್ತುಪ್ರದರ್ಶನಕ್ಕೆ ಪ್ರತಿಯಾಗಿ ಈ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಿಯುಸಿಎಲ್ ಆರೋಪಿಸಿದೆ.

ಪೊಲೀಸರ ಕ್ರಮವು ವಾಕ್ ಸ್ವಾತಂತ್ರ್ಯದ ಮೇಲಿನ ಘೋರ ದಾಳಿ ಮತ್ತು ನಾಗರಿಕ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ಪ್ರತಿಪಾದನೆಯನ್ನು ಅಪರಾಧೀಕರಿಸುವ ಪ್ರಯತ್ನವಾಗಿದೆ. ನದೀಮ್ ಖಾನ್ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ತಕ್ಷಣವೇ ರದ್ದುಗೊಳಿಸಬೇಕು. ದಿಲ್ಲಿ ಪೊಲೀಸರು ಕಿರುಕುಳವನ್ನು ನೀಡುವುದನ್ನು ಕೊನೆಗೊಳಿಸಬೇಕು ಮತ್ತು ಖಾನ್ ಕುಟುಂಬಕ್ಕೆ ಪರಿಹಾರ ನೀಡಬೇಕು. ಶಾಹೀನ್ ಬಾಗ್ ಪೊಲೀಸ್ ಠಾಣೆಯ ಎಸ್ಎಚ್ಒ ವಿರುದ್ಧ ಬೆದರಿಕೆ ಮತ್ತು ಅತಿಕ್ರಮಣಕ್ಕಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪಿಯುಸಿಎಲ್ ಆಗ್ರಹಿಸಿದೆ.

ಈ ಕುರಿತು ʼವಾರ್ತಾಭಾರತಿʼ ಜೊತೆ ಮಾತನಾಡಿದ ಎಪಿಸಿಆರ್ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಡ್ವಕೇಟ್ ನಿಯಾಝ್ ಅಹ್ಮದ್, ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. ನಿನ್ನೆ 5 ಗಂಟೆಯ ವೇಳೆ ದಿಲ್ಲಿ ಪೊಲೀಸರು ನದೀಮ್ ಖಾನ್ ಸಹೋದರನ ಮನೆಗೆ ತೆರಳಿದ್ದಾರೆ. ಮೊದಲು ನದೀಮ್ ಖಾನ್ ಬಂಧನಕ್ಕೆ ಬಂದಿದ್ದೇವೆ ಎಂದು ಹೇಳಿದ ಪೊಲೀಸರು, ನಾವು ಕಾನೂನು ಪ್ರಕ್ರಿಯೆಯ ಪಾಲನೆ ಬಗ್ಗೆ ಕೇಳಿದಾಗ ರಾಗವನ್ನು ಬದಲಿಸಿ ನಾವು ನೋಟಿಸ್ ನೀಡಲು ಬಂದಿದ್ದೇವೆ ಎಂದು ಹೇಳಿದ್ದಾರೆ. ನದೀಮ್ ಅವರ ವಿರುದ್ಧ ಎಫ್ ಐಆರ್ ಆಗಿರುವುದು ಮಧ್ಯಾಹ್ನ 12.48ಕ್ಕೆ ಆದರೆ 5 ಗಂಟೆಗೆ ದಿಲ್ಲಿ ಪೊಲೀಸರು ಬೆಂಗಳೂರಿಗೆ ತಲುಪಿದ್ದಾರೆ. ಅವರು ತಮ್ಮ ಭೇಟಿಯ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ನವೆಂಬರ್ 29ರಂದು, ಸುಮಾರು 20-25 ಪೊಲೀಸ್ ಅಧಿಕಾರಿಗಳು ದಿಲ್ಲಿಯ ಎಪಿಸಿಆರ್ ಕಚೇರಿಗೆ ನೋಟಿಸ್ ಅಥವಾ ಯಾವುದೇ ಕಾನೂನು ಸಮರ್ಥನೆ ಇಲ್ಲದೆ ಭೇಟಿ ನೀಡಿದ್ದು, ಖಾನ್ ಮತ್ತು ಸಂಸ್ಥೆಯ ಇತರ ಸದಸ್ಯರ ಬಗ್ಗೆ ವಿಚಾರಿಸಿದ್ದಾರೆ. ಪೊಲೀಸರ ಭೇಟಿ ಬಗ್ಗೆ ಕಾರಣ ಕೇಳಿದಾಗ ಪೊಲೀಸ್ ಅಧಿಕಾರಿಗಳು ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಿಯಾಝ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News