27 ಟಿಎಂಸಿ ನೀರು ಸದ್ಬಳಕೆ ಬಗ್ಗೆ ನೆರೆ ರಾಜ್ಯಗಳ ಜತೆ ಚರ್ಚೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ನವಲಿ ಸಮಾನಾಂತರ ಜಲಾಶಯ ಹಾಗೂ ಮತ್ತೊಂದು ಪರ್ಯಾಯ ಯೋಜನೆ ವಿಚಾರವಾಗಿ ಆಂಧ್ರ, ತೆಲಂಗಾಣ ರಾಜ್ಯಗಳ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣದಿಂದ 27 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ನವಲಿ ಜಲಾಶಯ ಮಾಡಲು ಯೋಜನೆ ರೂಪಿಸಲಾಗಿದ್ದು, ಈ ಮಧ್ಯೆ ಇದಕ್ಕೆ ತುಂಗಭದ್ರಾ ಮಂಡಳಿಯ ಮುಂದೆ ಪರ್ಯಾಯವಾಗಿ ಪ್ರಸ್ತಾವನೆಯೊಂದು ಬಂದಿದೆ.
ಈ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಪರಿಶೀಲನೆ ಮಾಡುತ್ತಿವೆ. ನಾನು ಈಗಾಗಲೇ ತೆಲಂಗಾಣ ನೀರಾವರಿ ಸಚಿವರ ಜತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಚರ್ಚೆ ಮಾಡಲು ಸಮಯ ನೀಡುವುದಾಗಿ ಉಭಯ ರಾಜ್ಯಗಳು ಹೇಳಿದ್ದು, ಸಮಯ ನಿಗದಿಯಾದ ಬಳಿಕ ಆಂಧ್ರ ಪ್ರದೇಶ ಸಿಎಂ ಜತೆ ಚರ್ಚೆ ಮಾಡಿ ಇದನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ಸಿನ ಮತ್ತೋರ್ವ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿ, ಅಧಿಕಾರಿಗಳು ಭೀಮಾ ನದಿಯ ಯೋಜನೆಗಳ ಮೂಲಕ 58663 ಹೆಕ್ಟೇರ್ ಪ್ರದೇಶಗಳಲ್ಲಿ ನೀರಾವರಿ ಒದಗಿಸಲಾಗಿದೆ. ಜತೆಗೆ, ಬೆಣ್ಣೆತೊರೆ ಹಾಗೂ ಇತರೆ ನೀರಾವರಿ ಯೋಜನೆ ಮೂಲಕ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ನಿಯೋಗವನ್ನು ಕರೆದುಕೊಂಡು ಈ ಭಾಗದಲ್ಲಿ ಚರ್ಚೆ ಮಾಡಬೇಕೆಂದು ಸದಸ್ಯರು ಕೇಳಿದ್ದಾರೆ. ಈ ವಿಚಾರವಾಗಿ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.