‘ಸಂವಿಧಾನ ಬದಲಿಸುವ’ ಹೇಳಿಕೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ : ಡಿ.ಕೆ.ಶಿವಕುಮಾರ್ ಸವಾಲು

ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಸಂವಿಧಾನ ಬದಲಾವಣೆ ಕುರಿತು ಮಾತನಾಡಲು ನನಗೆ ತಲೆಕೆಟ್ಟಿಲ್ಲ. ನಾನು ಸಂದರ್ಶನದಲ್ಲಿ ಸತ್ಯ ಮಾತನಾಡಿರುವುದನ್ನು ಹಾಗೂ ನನ್ನ ರಾಜಕೀಯ ನಿಲುವನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನ ಬದಲಿಸುತ್ತೇನೆಂದು ಎಲ್ಲಿ ಹೇಳಿದ್ದೇನೆ?’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಏನನ್ನಾದರೂ ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ಜಾರಿಗೆ ತಂದವರು ನಾವು, ನಾವು ಅದನ್ನು ರಕ್ಷಣೆ ಮಾಡುತ್ತಿದ್ದೇವೆ. ಬಿಜೆಪಿಯವರು ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ದಡ್ಡರಲ್ಲ, ನಾನು ಏನು ಮಾತನಾಡಿದ್ದೇನೆಂದು ಅವರು ನೋಡಿದ್ದಾರೆ ಎಂದು ಹೇಳಿದರು.
‘ಸಂವಿಧಾನ ಬದಲಿಸುತ್ತೇವೆಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿಯವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆಂದು ಕೇಳಿ ಎಂದು ಶಿವಕುಮಾರ್ ತಿಳಿಸಿದರು.
ನನ್ನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನನಗೆ ವಿವರಣೆ ಕೇಳಿದೆ. ನಾನು ದಾಖಲೆ ತೆಗೆದು ನೋಡಿ ಎಂದು ಹೇಳಿದ್ದೆ. ಅವರು ನೋಡಿದ್ದು, ನಂತರ ಅವರಿಗೆ ನಾನು ಹಾಗೇ ಹೇಳಿಲ್ಲ ಎಂಬುದರ ಅರಿವಾಗಿದೆ ಎಂದ ಶಿವಕುಮಾರ್, ಬಿಜೆಪಿಯವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನ್ನ ಬಗ್ಗೆ ಮಾತನಾಡದಿದ್ದರೆ, ಅವರಿಗೆ ನಿದ್ದೆ ಬರುವುದಿಲ್ಲ. ಅದಕ್ಕಾಗಿ ಪ್ರತಿಭಟನೆ ಮಾತನಾಡುತ್ತಾರೆ, ಮಾತನಾಡಲಿ ಎಂದು ಹೇಳಿದರು.
ಸಿಬಿಐ ವರದಿ ಏನಾಯ್ತು?: ಫೋನ್ ಕದ್ದಾಲಿಕೆ ವಿಚಾರದ ಬಗ್ಗೆ ನಾನು ಜೈಲಲ್ಲಿದ್ದಾಗ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಫೋನ್ ಟ್ಯಾಪಿಂಗ್ ಸುದ್ದಿ ಓದಿದ್ದೆ. ಅದಾದ ನಂತರ ತನಿಖೆ ನಡೆಯಿತು. ಈ ವಿಚಾರವಾಗಿ ಸಿಬಿಐ ತನಿಖೆ ಮಾಡಿತ್ತು. ಬಿಜೆಪಿಯವರು ಸಿಬಿಐ ವರದಿಯನ್ನು ಪ್ರಕಟಿಸಲಿ, ಆ ಮೇಲೆ ಮಿಕ್ಕ ವಿಚಾರ ಮಾತನಾಡೋಣ ಎಂದು ಶಿವಕುಮಾರ್ ತಿರುಗೇಟು ನೀಡಿದರು.
ನ್ಯಾಯ ಸಿಗುವ ವಿಶ್ವಾಸ: ಮೇಕೆದಾಟು ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ನಮ್ಮ ನೀರು ನಮ್ಮ ಹಕ್ಕು. ತಮಿಳುನಾಡಿನವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಜೆ.ಎಚ್.ಪಟೇಲ್ ಸಿಎಂ ಆಗಿದ್ದ ವೇಳೆ ಹೋಗಿ ಮಾತುಕತೆ ಮಾಡಲಾಗಿತ್ತು.
ನಾವು ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪಿಗೆ ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ವಾದ ಮಾಡಲಿ, ನಾವು ನಮ್ಮ ವಾದ ಮಂಡಿಸುತ್ತೇವೆ. ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ನಾವು ಬದ್ಧ. ಕೇಂದ್ರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ಕೋರ್ಟ್‍ನಲ್ಲೂ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.