ಅವರು ಬದುಕಿದ್ದಿದ್ದರೆ ಸಚಿವರಾಗುತ್ತಿದ್ದರು..: ಧ್ರುವನಾರಾಯಣ್ ನೆನೆದು ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಡಿ.ಕೆ.ಶಿವಕುಮಾರ್

Update: 2023-07-03 12:00 GMT

ಬೆಂಗಳೂರು, ಜು. 3: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧೃವನಾರಾಯಣ್ ಅವರನ್ನು ನೆನೆದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ವಿಧಾನಮಂಡಲ ಅಧಿವೇಶನದ ಮೊದಲ ದಿನದ ಕಲಾಪದಲ್ಲಿ, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಧೃವನಾರಾಯಣ ಅವರ ಜತೆಗಿನ ಒಡನಾಟ, ಅವರ ಕೆಲಸದ ವೈಖರಿಯನ್ನು ನೆನೆದು ಭಾವುಕರಾದರು.

ನನಗೆ ರಾಜಕಾರಣದಲ್ಲಿ ಸಹೋದರನಂತಿದ್ದ ಧೃವನಾರಾಯಣ್ ಅಗಲಿಕೆಯಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧೃವನಾರಾಯಣ್ ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಜವಾಬ್ದಾರಿ ವಹಿಸಿದ್ದೆ. ಈ ಎಲ್ಲ ಕಡೆಗಳಲ್ಲಿ ಅವರು ಶುದ್ಧ ರಾಜಕಾರಣ ಮಾಡಿದ್ದಾರೆ ಎಂದು ಅವರು ಹೇಳಿದರು.

ನನ್ನ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಧೃವನಾರಾಯಣ್ ಅವರನ್ನು ಕೂರಿಸಬೇಕು ಎಂಬ ಆಲೋಚನೆಯಿತ್ತು. ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಸಚಿವ ಸಂಪುಟದ ಸದಸ್ಯರಾಗಿದ್ದಾರೆ. ಧೃವನಾರಾಯಣ್ ಬದುಕಿದ್ದಿದ್ದರೆ, ಅವರು ಸಚಿವರಾಗುತ್ತಿದ್ದುದ್ದನ್ನು ಯಾರಿಂದಲೂ ತಪ್ಪಿಸಲು ಆಗುತ್ತಿರಲಿಲ್ಲ ಎಂದು ಅವರು ಹೇಳಿದರು.

ನಮ್ಮ ಪಕ್ಷದ ವತಿಯಿಂದ ಮಾಡಿದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿದ್ದರು. ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಾಗ ಆಗಿನ ಮಂತ್ರಿಗಳು ಕೇವಲ 3 ಮಂದಿ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಧೃವನಾರಾಯಣ್ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸುವಂತೆ ಮಾಡಿದ ನಂತರ 36 ಮಂದಿ ಸತ್ತಿರುವ ಸತ್ಯಾಂಶ ಬಯಲಿಗೆ ಬಂದಿತು ಎಂದು ಶಿವಕುಮಾರ್ ಸ್ಮರಿಸಿದರು.

ವಿದ್ಯಾರ್ಥಿ ನಾಯಕನಾಗಿದ್ದ ಧೃವನಾರಾಯಣ್ ಬಿಜೆಪಿಗೆ ಹೋಗಿದ್ದರು, ನಾನು ಅವರನ್ನು ಕರೆತಂದಿದ್ದೆ. ಎಸ್.ಎಂ.ಕೃಷ್ಣ ಕಾಲದಲ್ಲಿ ಅವರಿಗೆ ಟಿಕೆಟ್ ಕೊಡಿಸಿ ಸ್ಪರ್ಧಿಸುವಂತೆ ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇವಲ 1 ಮತದ ಅಂತರದಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದರು ಎಂದು ಅವರು ಹೇಳಿದರು.

ಅಂಜನಮೂರ್ತಿ ಹಾಗೂ ನಾನು ಒಟ್ಟಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. ಅವರು ಬಹಳ ವರ್ಷಗಳ ಕಾಲ ಬೆಂಗಳೂರಿನಲ್ಲಿ ರಾಜಕಾರಣ ಮಾಡಿದ್ದಾರೆ. ಇಂದು ಅವರು ನಮ್ಮನ್ನು ಅಗಲಿದ್ದಾರೆ. ಮೂಲತಃ ನ್ಯಾಯವಾದಿಗಳಾಗಿದ್ದ ಅಂಜನಮೂರ್ತಿ, ತಮ್ಮದು ಮೀಸಲು ಕ್ಷೇತ್ರವಾದರೂ ಒಂದೇ ಒಂದು ಪಿಟಿಸಿಎಲ್ ಪ್ರಕರಣಕ್ಕೆ ಅವಕಾಶ ನೀಡುತ್ತಿರಲಿಲ್ಲ. ಅವರು ಸಚಿವರಾಗಿ, ಉಪಸಭಾಪತಿಗಳಾಗಿ ಕೆಲಸ ಮಾಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಇನ್ನು ನನ್ನ ಮತ್ತೊಬ್ಬ ಸ್ನೇಹಿತ ಇನಾಮ್ದಾರ್, ವೆಂಕಟೇಶ್ ಸ್ವಾಮಿ, ಭುಜಂಗಶೆಟ್ಟಿ, ಸಭಾಪತಿ ಕೂಡ ನಮ್ಮ ಜತೆ ಶಾಸಕರಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ಅವರು ಕೂಡ ನಮ್ಮನ್ನು ಅಗಲಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತೇನೆ ಎಂದು ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News