‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ಹೊರ ವಲಯದ ನಗರಗಳನ್ನು ಸೇರ್ಪಡೆ ಮಾಡಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು: ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ, ಬಿಡದಿಯನ್ನು ಸೇರಿಸುವುದಿಲ್ಲ. ಆದರೆ, ಉಪನಗರ(ಟೌನ್‌ಶಿಫ್)ಗಳಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನ ಹೊರವಲಯದ ನಗರಗಳಿಗೆ ಸೂಕ್ತ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಪ್ರಸ್ತಾವ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಜು.16ರಂದು ಆರ್ಥಿಕ ಇಲಾಖೆಯು ತಾತ್ವಿಕ ಅನುಮೋದನೆಗೆ ಒಪ್ಪಿಗೆ ನೀಡಿದೆ. ಈ ಯೋಜನೆಯ ಬಗ್ಗೆ ಸಾಂಖ್ಯಿಕ ಇಲಾಖೆಯ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ಹೊರವಲಯದಲ್ಲಿನ 110 ಹಳ್ಳಿಗಳನ್ನು ಈಗಾಗಲೇ ಸೇರಿಸಲಾಗಿದೆ. ಸದ್ಯಕ್ಕೆ ಹೊರ ವಲಯದ ಯಾವುದೇ ನಗರಗಳನ್ನು ಹೊಸ ಸೇರ್ಪಡೆ ಮಾಡುವುದಿಲ್ಲ. ಆದರೆ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ, ಬಿಡದಿ ನಗರಗಳು ಅಭಿವೃದ್ಧಿ ಆಗುತ್ತಿದ್ದು, ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.
ನಮ್ಮನ್ನು ಸೇರ್ಪಡೆ ಮಾಡಿ: ‘ದೊಡ್ಡಬಳ್ಳಾಪುರ ಕೈಗಾರಿಕಾ ವಲಯವು ವೇಗವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ‘ಗ್ರೇಟರ್ ಬೆಂಗಳೂರು’ ವ್ಯಾಪ್ತಿಗೆ ನಮ್ಮನ್ನು ಸೇರ್ಪಡೆ ಮಾಡಬೇಕು. ಜತೆಗೆ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಧೀರಜ್ ಮುನಿರಾಜು ಕೋರಿದರು.