ಬೆಂಗಳೂರಿನಲ್ಲಿ ರಸ್ತೆಗಿಳಿಯಲಿವೆ ‘ಡಬ್ಬಲ್ ಡೆಕ್ಕರ್’ ಬಸ್ಗಳು
ಬೆಂಗಳೂರು, ಸೆ.4: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಐದು ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಬಸ್‍ಗಳು ಸಂಚರಿಸಲಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಬಸ್‍ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಕಲಾಸಿಪಾಳ್ಯ ಟಿಟಿಎಂಸಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಬ್ಬಲ್ ಡೆಕ್ಕರ್ ಬಸ್‍ಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪೂರ್ಣವಾಗಲಿದೆ. ಮೊದಲ ಹಂತವಾಗಿ 5 ಡಬ್ಬಲ್ ಡೆಕ್ಕರ್ ಬಸ್‍ಗಳನ್ನು ರಸ್ತೆಗಿಳಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಐದುಮಾರ್ಗ ರೂಪಿಸಲಾಗಿದೆ ಎಂದರು.
ಡಬ್ಬಲ್ ಡೆಕ್ಕರ್ ಬಸ್‍ಗಳಿಗೆ ಬಿಎಂಟಿಸಿ ಬಸ್‍ನ ಬಣ್ಣವನ್ನೆ ಅಂತಿಮಗೊಳಿಸಲಾಗಿದೆ. ಆದರೆ, ಡಬ್ಬಲ್ ಡೆಕ್ಕರ್ ಬಸ್ ವಿನ್ಯಾಸದ ಬಗ್ಗೆ ಚರ್ಚೆ ನಡೆದಿದೆ. ಜಪಾನ್‍ನ ಡಬ್ಬಲ್ ಡೆಕ್ಕರ್ ಬಸ್ ಮಾದರಿಯನ್ನು ನನ್ನ ಆಪ್ತರು ಕಳಿಸಿದ್ದು, ಅದನ್ನು ಸಹ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕಳಿಸಿಕೊಟ್ಟಿದ್ದೇನೆ. ನಮ್ಮ ಯೋಜಿತ ವಿನ್ಯಾಸ ಹಾಗೂ ಜಪಾನ್ ಮಾದರಿಯನ್ನೆಲ್ಲ ನೋಡಿ, ಇಲ್ಲಿನ ಅವಶ್ಯಕತೆಗೆ ತಕ್ಕಂತೆ ವಿನ್ಯಾಸ ಅಂತಿಮಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.
ರಾತ್ರಿ ಬಸ್‍ಗಳಲ್ಲಿ ದರ ಕಡಿಮೆ..!: ‘ಬಿಎಂಟಿಸಿ ರಾತ್ರಿ ಸೇವೆ ಬಸ್‍ಗಳಲ್ಲಿ ನೈಟ್ ಟ್ರಿಪ್‍ನ ಹೆಚ್ಚುವರಿ ದರ ವ್ಯವಸ್ಥೆಯನ್ನು ಇಂದಿನಿಂದಲೇ ರದ್ದುಪಡಿಸಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ ಪ್ರಯಾಣ ಮಾಡುವ ಪ್ರಯಾಣಿಕರಿಂದ ಟಿಕೆಟ್ ದರವನ್ನು ಒಂದೂವರೆ ಪಟ್ಟು ಹೆಚ್ಚು ಪಡೆಯಲಾಗುತ್ತಿತ್ತು. ತಡರಾತ್ರಿ ಒಂದೂವರೆ ಪಟ್ಟು ಟಿಕೆಟ್ ನೀಡಬಾರದು ಎಂದು ಇಂದಿನಿಂದಲೇ ಆದೇಶ ಮಾಡುತ್ತಿದ್ದೇನೆ’ ಎಂದು ರಾಮಲಿಂಗಾರೆಡ್ಡಿ ಪ್ರಕಟಿಸಿದರು.