ಬಿಜೆಪಿಯ ರಾಜ್ಯಾಧ್ಯಕ್ಷರ ಆಯ್ಕೆ ಕಾಂಗ್ರೆಸ್ ನ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ: ಆಯನೂರು ಮಂಜುನಾಥ್

Update: 2023-11-11 06:38 GMT

ಶಿವಮೊಗ್ಗ: ಭಾರತೀಯ ಜನತಾ ಪಾರ್ಟಿಯಲ್ಲಿ ಬಹಳ ತಡವಾಗಿದ್ದರೂ ಕೂಡ ಗಜ ಪ್ರಸವ ರೀತಿಯಲ್ಲಿ ಅಂತೂ ರಾಜ್ಯ ಅಧ್ಯಕ್ಷರ ಆಯ್ಕೆ ಆಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ,ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿ.ವೈ ವಿಜೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಬಹಳ ಸಂತೋಷದ ವಿಚಾರ. ಶಿವಮೊಗ್ಗಕ್ಕೆ ಒಂದು ರಾಜ್ಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಬಿಜೆಪಿಯಲ್ಲಿ ಇದೇ ಮೊದಲ ಬಾರಿ ಅತ್ಯಂತ ಚಿಕ್ಕ ವಯಸ್ಸಿನ ರಾಜ್ಯಾಧ್ಯಕ್ಷರ ನೇಮಕ ಆಗಿದೆ. ಯಶಸ್ವಿಯಾಗಿ ಬಹಳ ಎಚ್ಚರದಿಂದ ಕೆಲಸ ಮಾಡಲಿ ಎಂದರು.

ವಿಜಯೇಂದ್ರ ಇಡುವಂತಹ ಪ್ರತಿಯೊಂದು ಹೆಜ್ಜೆ ಯಡಿಯೂರಪ್ಪರ ಮೇಲೆ ಪ್ರಭಾವ ಬೀರುತ್ತದೆ. ವಿಜಯೇಂದ್ರ ಹಿಂದೆ ಯಡಿಯೂರಪ್ಪ ಅವರ ಪ್ರಭಾವ ಇದೆ. ಹಾಗಾಗಿ ಅವರ ಸಫಲತೆ ಹಾಗೂ ವಿಫಲತೆ ಎರಡು ಕೂಡ ಯಡಿಯೂರಪ್ಪರ ಮೇಲೆ ಪ್ರಭಾವ ಬೀರುತ್ತದೆ. ಯಡಿಯೂರಪ್ಪ ಅವರ ಘನತೆಗೂ ಕೂಡ ಪ್ರಭಾವ ಬೀರುವ ರೀತಿ ಇರುವುದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ರಾಜಕೀಯ ನಿರ್ಣಯಗಳನ್ನು ಬಹಳ ಮುತುವರ್ಜಿ ತೆಗೆದುಕೊಳ್ಳಬೇಕು. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದನ್ನು ನಾನು ಸದ್ಯಕ್ಕೆ ಹೇಳುವುದಿಲ್ಲ. ಅದನ್ನು ಕಾಲವೇ ನಿರ್ಣಯ ಮಾಡುತ್ತದೆ. ಯಡಿಯೂರಪ್ಪನವರ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ಈ ರೀತಿ ಮಾಡಿದ್ದಾರೆ ಎಂದರು.

ಪಾರ್ಲಿಮೆಂಟ್ ಚುನಾವಣೆಗೆ ಯಡಿಯೂರಪ್ಪನವರ ಅವಶ್ಯಕತೆ ಬಿಜೆಪಿಗೆ ತುಂಬಾನೇ ಇದೆ. ಮಗನನ್ನು ಆಯ್ಕೆ ಮಾಡುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಯನ್ನು ಹೆಚ್ಚು ಸ್ಥಾನದಿಂದ ಗೆಲ್ಲಿಸುವ ಜವಾಬ್ದಾರಿ ವಿಜಯೇಂದ್ರ ಅವರಿಗಿಂತಲೂ ಯಡಿಯೂರಪ್ಪರವರಿಗೆ ಇದೆ ಎಂದರು.

ವಿಜಯೇಂದ್ರ ಆಯ್ಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆಗಳಿಲ್ಲ. ಈಗಾಗಲೇ ಕಾಂಗ್ರೆಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದೆ. ಬಿಜೆಪಿ ಈ ಆಯ್ಕೆಯಿಂದ ಅವರ ಆಂತರಿಕ ಕಲಹ, ಭ್ರಷ್ಟಾಚಾರ ಯಾವುದು ಕೂಡ ಮಾಯವಾಗುವುದಿಲ್ಲ. ಅವರ ಕೆಲಸಕ್ಕಾಗಿ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹೊರತು ಇನ್ನು ಯಾವುದೇ ರೀತಿಯ ಪ್ರಭಾವ ಕಾಂಗ್ರೆಸ್ ಮೇಲೆ ಬೀರುವುದಿಲ್ಲ ಎಂದರು.

ಬಿಜೆಪಿ ಇನ್ನು ಮುಂದೆ ಆದರೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವುದನ್ನು ಬಿಡಬೇಕು. ಬಿ.ವೈ ವಿಜಯೇಂದ್ರ ಅವರು ತಮ್ಮ ಸಾಮರ್ಥ್ಯವನ್ನು  ಸಾಬೀತು ಪಡಿಸಿಕೊಳ್ಳಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News