ಮೊದಲ ಬಾರಿಗೆ 1,832 ವಿಶೇಷ ಮತಗಟ್ಟೆಗಳ ಸ್ಥಾಪನೆ : ರಾಜ್ಯ ಮುಖ್ಯ ಚುನಾವಣಾಧಿಕಾರಿ

Update: 2024-04-24 15:16 GMT

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ಶುಕ್ರವಾರ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಜತೆಗೆ ಈ ಬಾರಿ ವಿಶೇಷವಾಗಿ ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆಗಳ ಸ್ಥಾಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಬುಧವಾರ ನಗರದ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದರಂತೆ ಒಟ್ಟು 1,120 ಸಖಿ ಮತಗಟ್ಟೆ ಜತೆಗೆ. ಭದ್ರತಾ ಸಿಬ್ಬಂದಿ, 'ಡಿ' ದರ್ಜೆ ಸಿಬ್ಬಂದಿ ಎಲ್ಲ ಮಹಿಳೆಯರೇ ಇರುತ್ತಾರೆ ಎಂದು ಹೇಳಿದರು.

ಹಾಗೆಯೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು “ಅಂಗವಿಕಲರ ವಿಶೇಷ ಮತಗಟ್ಟೆ' ಸ್ಥಾಪಿಸಿದ್ದು, ಅಲ್ಲಿಗೆ ಅಂಗವಿಕಲ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಯುವ ಮತಗಟ್ಟೆ ತೆರೆದು ಅಲ್ಲಿಗೆ ಯುವ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಹೇಳಿದರು.

ಎಲ್ಲ ಮತದಾರರಲ್ಲಿ ಚುನಾವಣೆ ಮತ್ತು ಮತದಾನದ ಕುರಿತು ಅರಿವು ಮೂಡಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಧ್ಯೇಯ ಆಧಾರಿತ ಮತಗಟ್ಟೆ ವ್ಯವಸ್ಥೆ ಮಾಡಲಾಗಿದ್ದು, ಪರಿಶಿಷ್ಟ ಪಂಗಡಗಳ ಜನರನ್ನು ಮತಗಟ್ಟೆಗಳತ್ತ ಸೆಳೆಯಲು ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಸಾಂಸ್ಕೃತಿಕ ವೈವಿಧ್ಯ ಬಿಂಬಿಸುವ 40 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.

ಇನ್ನೂ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್ಟಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ, ಕೋಲಾರ (ಎಸ್ಸಿ) ಈ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ.

ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಹಾಗೂ ನ್ಯಾಯಸಮ್ಮತ, ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಶೇ.90ಕ್ಕೂ ಹೆಚ್ಚು ವೋಟರ್ ಸ್ಲಿಪ್‍ಅನ್ನು ತಲುಪಿಸಲಾಗಿದೆ. ಮತದಾನದ ಸಮಯದಲ್ಲಿ ಆ ಸ್ಲಿಪ್ ಅನ್ನು ಎಪಿಕ್ ಕಾರ್ಡ್ ಅನ್ನು ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‍ ಪೋರ್ಟ್, ಪ್ಯಾನ್ ಕಾರ್ಡ್ ಸೇರಿದಂತೆ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದರು.

ಎರಡನೆ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್ಸಿ), ಕಲಬುರಗಿ (ಎಸ್ಟಿ), ರಾಯಚೂರು (ಎಸ್ಟಿ) ಬೀದರ್, ಕೊಪ್ಪಳ, ಬಳ್ಳಾರಿ (ಎಸ್ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮುಖ್ಯವಾಗಿ ಮತಗಟ್ಟೆಯಲ್ಲಿ ಇಳಿಜಾರು ಸೌಲಭ್ಯ, ಕುಡಿಯುವ ನೀರು, ವಿದ್ಯುತ್ಛಕ್ತಿ, ಪೀಠೊಪಕರಣ, ನಿರೀಕ್ಷಣ ಕೊಠಡಿ, ಪುರುಷ ಮತ್ತು ಮಹಿಳಾ ಶೌಚಾಲಯ, ಸೂಚನಾ ಚಿಹ್ನೆ ಇರಬೇಕೆಂದು ಸೂಚಿಸಲಾಗಿದೆ. ಹಾಗೆ, ಕ್ಷಿಪ್ರ ಪಡೆಗಳು 2,357, ಸ್ಥಿರ ಕಣ್ಗಾವಲು ತಂಡಗಳು 2,669, ವಿಡಿಯೋ ಕಣ್ಗಾವಲು ತಂಡಗಳು 647, ಲೆಕ್ಕ ಪರಿಶೋಧಕ ತಂಡಗಳು 258, ವೀಡಿಯೊ ವೀಕ್ಷಣೆಗೆ 257 ತಂಡ ರಚಿಸಲಾಗಿದೆ ಎಂದು ಅವರು ವಿವರಿಸಿದರು.

ಸುರಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸೇರಿದಂತೆ ರಾಜ್ಯದಲ್ಲಿ ಎಡಗೈ ತೋರುಬೆರಳಿಗೆ ಇಂಕ್ ಶಾಹಿ ಹಾಕಲಾಗುವುದು ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.

ಮತಗಟ್ಟೆಗಳಲ್ಲಿ ವಿಶೇಷ ವೈದ್ಯಕೀಯ ಕಿಟ್..!

ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ವಿಶೇಷ ವೈದ್ಯಕೀಯ ಕಿಟ್ ವ್ಯವಸ್ಥೆ ಮಾಡಲಾಗಿದೆ. ನಿರ್ಜಲೀಕರಣ ಹಾಗೂ ಸನ್ ಸ್ಟ್ರೋಕ್ ಸಂಬಂಧ ವೈದ್ಯಕೀಯ ಕಿಟ್ ವ್ಯವಸ್ಥೆಯನ್ನು ಮಾಡಲಾಗುವುದು. ಒಂಬತ್ತು ಕ್ಲಸ್ಟರ್ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಹ ಮಾಡಲಾಗುವುದು ಎಂದು ವಿವರಿಸಿದರು.

*ಒಟ್ಟು ಅಭ್ಯರ್ಥಿಗಳು-247

*ಪುರಷರು-226

*ಮಹಿಳೆಯರು-21

*ಒಟ್ಟು ಲೋಕಸಭಾ ಕ್ಷೇತ್ರಗಳು-14

*ಕಾಂಗ್ರೆಸ್-14

*ಬಿಜೆಪಿ-11

*ಜೆಡಿಎಸ್-3

*ಒಟ್ಟು ಮತದಾರರು-2,88,08,182

*ಪುರುಷರು-1,44,17,530

*ಮಹಿಳೆಯರು-1,43,87,585

*ತೃತೀಯ ಲಿಂಗಿಗಳು-3,067

*ಸೇವಾ ಮತದಾರರು-11,160

*ಯುವ ಮತದಾರರು(18ರಿಂದ19 ವರ್ಷದವರು)-5,99,444

*ದಿವ್ಯಾಂಗ ಮತದಾರರು-2,76,042

*85 ವರ್ಷ ಮೇಲ್ಪಟ್ಟವರು-3,40,856

*ಸಾಗರೋತ್ತರ ಮತದಾರು-2849

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News