12 ಎಕರೆಯಲ್ಲಿ ಟೊಮೆಟೊ ಬೆಳೆದು 40 ಲಕ್ಷ ಆದಾಯ ಗಳಿಸಿದ ಚಾಮರಾಜನಗರದ ರೈತ ಸಹೋದರರು
ಚಾಮರಾಜನಗರ : ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಗ್ರಾಹಕರು ಟೊಮೆಟೊ ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದಾಗಿ ಟೊಮೆಟೊ ಬೆಳೆದ ರೈತರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಚಾಮರಾಜನಗರದ ಯುವ ರೈತರಿಬ್ಬರು ಒಟ್ಟು 12 ಎಕರೆಯಲ್ಲಿ ಟೊಮೆಟೊ ಬೆಳೆದು 40 ಲಕ್ಷ ರೂಪಾಯಿ ಸಂಪಾದಿಸಿದ್ದಾರೆ. ಚಾಮರಾಜನಗರ ತಾಲೂಕಿನ ಲಕ್ಷ್ಮಿಪುರದ ಸಹೋದರರಾದ ರಾಜೇಶ್ ಮತ್ತು ನಾಗೇಶ್ ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ತೆಗೆದಿದ್ದಾರೆ. ಸಹೋದರರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಟೊಮೊಟೊ ಬೆಳೆ ಸಹೋದರರ ಕೈ ಹಿಡಿದಿದೆ.ಲಕ್ಷ್ಮಿಪುರ ಗ್ರಾಮದ ಕೃಷ್ಣಶೆಟ್ಟಿ ಎಂಬವರ ಮಕ್ಕಳಾದ ರಾಜೇಶ್ ಹಾಗೂ ನಾಗೇಶ್, ಸ್ವಂತ ಎರಡು ಎಕರೆ ಜಮೀನಿನ ಜೊತೆಗೆ 10 ಎಕರೆ ಜಮೀನು ಗುತ್ತಿಗೆ ಪಡೆದು ಟೊಮೆಟೊ ಬೆಳೆದಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ಟೊಮೆಟೊ ಬೆಳೆಯುತ್ತಿರುವ ಇವರಿಗೆ ಈ ಬಾರಿ ಉತ್ತಮ ಫಸಲು, ಬೆಲೆ ಸಿಕ್ಕಿದೆ. ಈಗಾಗಲೇ ಇವರು ಸುಮಾರು 50-60 ಟನ್ನಷ್ಟು ಟೊಮೊಟೊ ಮಾರಾಟ ಮಾಡಿದ್ದಾರೆ.
ರಾಜೇಶ್ ಮಾತನಾಡಿ, "ಕಳೆದ ನಾಲ್ಕು ವರ್ಷಗಳಿಂದ ನಾವು ಒಟ್ಟು 12 ಎಕರೆಯಲ್ಲಿ ಟೊಮೆಟೊ ಬೆಳೆಯುತ್ತಿದ್ದೇವೆ. ಈ ಬಾರಿ ಉತ್ತಮ ಬೆಲೆ ಲಭಿಸಿದೆ. ಇಲ್ಲಿವರೆಗೆ 2,000 ಬಾಕ್ಸ್ ಟೊಮೊಟೊ ಮಾರಿದ್ದೇವೆ. ಇದರಿಂದ ಒಟ್ಟು 40 ಲಕ್ಷ ರೂಪಾಯಿ ಆದಾಯ ದೊರೆತಿದೆ. ಕಳೆದ 4 ವರ್ಷಗಳಲ್ಲೇ ಈ ಬಾರಿ ಅತಿ ಹೆಚ್ಚು ಲಾಭ ಕಂಡಿದ್ದೇವೆ. ನಾನು, ನನ್ನ ಸಹೋದರ ನಾಗೇಶ್ ಹಾಗೂ ತಂದೆ, ತಾಯಿ ಹೊಲದಲ್ಲಿ ಒಟ್ಟಾಗಿ ದುಡಿದಿದ್ದೇವೆ. ರಾತ್ರಿ ವೇಳೆ ಜಮೀನು ಕಾಯುತ್ತೇವೆ. ಈ ಸಲ ಹೆಚ್ಚು ಆದಾಯ ಲಭಿಸಿರುವುದರಿಂದ ನಮ್ಮ ಸಾಲಗಳನ್ನು ತೀರಿಸಿದ್ದೇವೆ" ಎಂದು ಸಂತಸ ವ್ಯಕ್ತಪಡಿಸಿದರು.
ಸದ್ಯ ದೇಶಾದ್ಯಂತ ಟೊಮೆಟೊಗೆ ಬಂಪರ್ ಬೆಲೆ ಇದೆ. ಇನ್ನೂ ಒಂದು ತಿಂಗಳು ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರೈತರ ಹೊಲಕ್ಕೆ ದಲ್ಲಾಳಿಗಳು ಬಂದು ಟೊಮೆಟೊ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಅರ್ಧ ಕೊಯ್ಲು ಮುಗಿದಿದೆ. ಇನ್ನರ್ಧ ಕೊಯ್ಲು ಬಾಕಿ ಉಳಿದಿದ್ದು ಉತ್ತಮ ಆದಾಯದ ನಿರೀಕ್ಷೆ ರೈತರದ್ದು.