ಹೈಕೋರ್ಟ್ ಪೀಠದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲು

Update: 2024-04-04 13:38 GMT

ಸಾಂದರ್ಭಿಕ ಚಿತ್ರ (Photo: PTI)

ಬೆಂಗಳೂರು: ಪ್ರಕರಣವೊಂದರ ವಿಚಾರಣೆಯ ವೇಳೆ ಹೈಕೋರ್ಟ್ ಪೀಠದ ಮುಂದೆಯೇ ಹರಿತವಾದ ವಸ್ತುವಿನಿಂದ ಕುತ್ತಿಗೆಗೆ ಗಾಯ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಇಲ್ಲಿನ ವಿಧಾನಸೌಧ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಮೈಸೂರಿನ ಶ್ರೀನಿವಾಸ್ ಚಿನ್ನಂ ಎಂಬುವರು ಹೈಕೋರ್ಟ್‍ನಲ್ಲಿ ವಿಚಾರಣೆಯ ವೇಳೆ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದವರು. ಹೈಕೋರ್ಟ್ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಆರೋಪಿ ಶ್ರೀನಿವಾಸ್ ಚಿನ್ನಂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಗಾಯಾಳು ಶ್ರೀನಿವಾಸ್ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಹೇಳಿಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?: ಎ.3ರ ಬುಧವಾರದಂದು ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ.ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶ್ರೀನಿವಾಸ್ ಅವರ ವ್ಯಾಜ್ಯದ ಕುರಿತು ವಿಚಾರಣೆ ನಡೆಯುತ್ತಿದ್ದಾಗ, ಏಕಾಏಕಿ ಅವರು ‘ನನಗೆ ನ್ಯಾಯ ಕೊಡಿಸಿ' ಎಂದು ಹೇಳುತ್ತ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದರು.

ಅನಿರೀಕ್ಷಿತ ಘಟನೆಯಿಂದ ಹೈಕೋರ್ಟ್‍ನ ಹಾಲ್-1ರಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಶ್ರೀನಿವಾಸ್ ಅವರ ನಡೆಯಿಂದಾಗಿ ಅಲ್ಲಿದ್ದ ವಕೀಲರು ಗಾಬರಿಗೊಂಡು, ತಕ್ಷಣವೇ ಅವರನ್ನು ತಡೆದಿದ್ದರು. ಆದರೆ, ಕುತ್ತಿಗೆಗೆ ತೀವ್ರ ಗಾಯವಾಗಿತ್ತು. ಬಳಿಕ ಶ್ರೀನಿವಾಸ್‍ರನ್ನು ನ್ಯಾಯಮೂರ್ತಿಗಳು ಸೂಚನೆ ಮೇರೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿವಿಲ್ ವ್ಯಾಜ್ಯದ ಪ್ರಕರಣ ಇದಾಗಿದ್ದು, ಶ್ರೀನಿವಾಸ್ ಅವರಿಗೆ ಬೇರೊಬ್ಬ ವ್ಯಕ್ತಿಗಳು ವಂಚನೆ ಮಾಡಿದ ಆರೋಪ ಇದಾಗಿದೆ. ಈ ಹಿಂದೆಯೂ ಅವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಕುರಿತಂತೆ ಚೇತರಿಸಿಕೊಂಡ ಬಳಿಕ ಅವರ ಹೇಳಿಕೆ ದಾಖಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News