ಹರುಕು ಬಾಯಿಗೆ ಹೊಲಿಗೆ ಬಿದ್ದರೂ ಬುದ್ದಿ ಬಂದಿಲ್ಲ: ಈಶ್ವರಪ್ಪ ವಿರುದ್ದ ಆಯನೂರು ಮಂಜುನಾಥ್ ಕಿಡಿ

Update: 2023-10-21 07:16 GMT

ಶಿವಮೊಗ್ಗ: ಹರುಕು ಬಾಯಿಗೆ ಹೊಲಿಗೆ ಬಿದ್ದರೂ ಬುದ್ದಿ ಬಂದಿಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಮಾಜಿ ಸಂಸದ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿ ಸರಕಾರ ರಚನೆಗೆ ರಾಜ್ಯದ ಜನರು ಅವಕಾಶ ಕೊಟ್ಟಿದ್ದಾರೆ.ಕಳೆದ ನಾಲ್ಕೈದು ತಿಂಗಳಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ನಾಯಕರು ನೀರಿನಿಂದ ಹೊರಬಿದ್ದ ಮೀನಿನ ತರ ಒದ್ದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜನತೆ ಕಾಂಗ್ರೆಸ್‌ ಗೆ ಬಹುಮತ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ.ಆದರೆ ಕೇವಲ 5 ತಿಂಗಳೊಳಗೆ ಬಿಜೆಪಿ ಅಧಿಕಾರವಿಲ್ಲದೆ ಒದ್ದಾಡುತ್ತಿದೆ.ಅದಕ್ಕಾಗಿ 50 ಕೋಟಿ ರೂಪಾಯಿ ಹಣದ ಆಮಿಷವೊಡ್ಡಿ ಕಾಂಗ್ರೆಸ್‌ ಶಾಸಕರ ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ.ಸರ್ಕಾರ ಬೀಳಿಸುವ ಯತ್ನ ಮಾಡುತ್ತಿದೆ.ಇದಕ್ಕೆ ಪೂರಕವಾಗಿ ಈಶ್ವರಪ್ಪ ಸಹ ಸರ್ಕಾರ ಬೀಳಿಸುವುದಾಗಿ ಹೇಳುತ್ತಿದ್ದಾರೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬಂದ ಸರ್ಕಾರವನ್ನು ಬೀಳಿಸುವ ಕೆಲಸ ಮಾಡುತ್ತಿದ್ದಾರೆ.ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲವಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದವರು.ಅವರಿಗೆ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಶಕ್ತಿ ಇಲ್ಲ.ಪುರಸಭೆಯಲ್ಲಿ ಪಕ್ಷವನ್ನು ತಮ್ಮ ಶಕ್ತಿ ಮೇಲೆ ಅಧಿಕಾರಕ್ಕೆ ತರುವ ಸಾಮರ್ಥ್ಯ ಅವರಿಗಿಲ್ಲ. ಇಂತಹ ವ್ಯಕ್ತಿ ಡಿ.ಕೆ.ಶಿವಕುಮಾರ್ ರನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಈಶ್ವರಪ್ಪ ಅವರ ಅರ್ಹತೆ, ಭ್ರಷ್ಟಾಚಾರ ನೋಡಿ ಅವರಿಗಿದ್ದ ಎಲ್ಲಾ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋದಾಗ ನಾನೇನಾದರು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಎಂದಿದ್ದರು.ಈ ಮೂಲಕ ತಮ್ಮನ್ನು ರಾಜಕೀಯವಾಗಿ ಬೆಳಸಿದರವರ ಬಗ್ಗೆಯೇ ಮಾತನಾಡಿದರು.ಮಾತನಾಡುವ ಚಪಲ ಜಾಸ್ತಿ ಇದೆ ಎಂದರು.

ಈಶ್ವರಪ್ಪ ನೀರಾವರಿ ಸಚಿವರಾಗಿದ್ದಾಗ ಗುತ್ತಿಗೆದಾರನ ವಿರುದ್ಧ ನಿಮ್ಮ ಮಗ ಲೋಕಾಯುಕ್ತಕ್ಕೆ ದೂರು ನೀಡಿದ್ದರು.ಆದರೆ ಗುತ್ತಿಗೆದಾರ ನಿಮ್ಮನ್ನು ಬಂದು ಭೇಟಿ ಮಾಡಿದಾಗ ಸುಮ್ಮನಾದಿರಿ ಏಕೆ ಎಂದು ಪ್ರಶ್ನಿಸಿದ ಅವರು, ನೀರಾವರಿ ಸಚಿವರಾಗಿದ್ದಾಗ ಹಣ ದೋಚಿದ್ದು ಬಿಟ್ಟರೆ ನೀರಾವರಿ ವಿಚಾರವಾಗಿ ಒಂದೇ ಒಂದು ಸಲಹೆ ನೀಡಿಲ್ಲ ಎಂದರು.

ಈಶ್ವರಪ್ಪ ಹರಕು ಬಾಯಿ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು.ಇಂಧನ, ನೀರಾವರಿ ಸೇರಿದಂತೆ ನೀವು ನಿರ್ವಹಿಸಿದ ಖಾತೆಗಳಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಬೇರೇನು ಮಾಡಲಿಲ್ಲ ಎಂದ ಅವರು,ನೀರಾವರಿ-ಇಂಧನ ಇಲಾಖೆಯನ್ನೆ ದೋಚಿದ ಈ ವ್ಯಕ್ತಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ವಿರುದ್ದ ದ್ರೋಹದ ರಾಜಕಾರಣ ನಾನು ಮಾಡಿಲ್ಲ.ನಿಮ್ಮಂತೆ ನಾನು ಪಕ್ಷದ ನಾಯಕರ ವಿರುದ್ಧವೇ ಕತ್ತಿ ಮಸೆಯಲಿಲ್ಲ.ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಲಿಲ್ಲ. ಬದಲಿಗೆ ಮನಸ್ಸಿಗೆ ಸರಿ ಬರಲಿಲ್ಲ ಎಂದಾಗ ಪಕ್ಷ ಬಿಟ್ಟು ಹೊರಬಂದಿದ್ದೇನೆ.ನನಗೆ ನೈತಿಕತೆ ಇಲ್ಲ ಎನ್ನುವ ನಿಮಗೆ ಅದರ ಅರ್ಥವಾದರೂ ಗೊತ್ತಾ.ಈ ಮನುಷ್ಯನ ನೈತಿಕ ನೆಲಗಟ್ಟು ಯಾವುದು. ಈಶ್ವರಪ್ಪ ಭ್ರಷ್ಟಾಚಾರದ ತುತ್ತಾ ತುದಿಯಲ್ಲಿ ಇದ್ದಾರೆ ಎಂದು ಆರೋಪಿಸಿದರು.

ಅಧಿಕಾರ ಆಸೆಗಾಗಿ ಜೆಡಿಎಸ್ ಜೊತೆ ಮೈತ್ರಿ ಮುಂದಾಗಿರುವ ನೀವು, ಹಣ ಹೊಡೆಯುವುದನ್ನು ಬಿಟ್ಟರೆ ಶಿವಮೊಗ್ಗಕ್ಕೆ ನಿಮ್ಮ ಕೊಡುಗೆ ಏನು.ಅಭಿವೃದ್ಧಿಗಳ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ನನಗೂ ಏಕವಚನ ಬಳಸುವುದು ಗೊತ್ತು.ಯಾವುದೇ ಅಧ್ಯಯನ ಮಾಡದ ನಿಮಗೆ ವಿಚಾರಗಳೆ ಗೊತ್ತಿಲ್ಲ.ಪಕ್ಷ ನಿಮ್ಮ ಭ್ರಷ್ಟಾಚಾರ ಗಮನಿಸಿಯೇ ನಿಮಗೆ ದೂರವಿಟ್ಟಿದೆ.ನಾಲಿಗೆ ಹರಿಬಿಟ್ಟರೆ ನಿಮ್ಮ ಭ್ರಷ್ಟಾಚಾರವನ್ನು ದಾಖಲೆ ಸಮೇತ ಬಿಚ್ಚಿಡ ಬಲ್ಲೆ. ಆದರೆ ಎಲ್ಲಿಂದ ಶುರು ಮಾಡಬೇಕೆಂದು ಯೋಚಿಸುತ್ತಿದ್ದೇನೆ ಎಂದರು.

ʻʻಸಿದ್ದರಾಮಯ್ಯ ಹೇಳಿದಂತೆ ಈಶ್ವರಪ್ಪ ಅವರ ಮೆದುಳಿಗೂ ನಾಲಗೆಗೂ ಲಿಂಕ್ ತಪ್ಪಿ ಹೋಗಿದೆ.ಹುಚ್ಚು ಹುಚ್ಚಾಗಿ ಮಾತನಾಡಿದ ಕಾರಣಕ್ಕೆ ನಿಮ್ಮನ್ನು ಪಕ್ಷ ತಿರಸ್ಕಾರ ಮಾಡಿದೆ.ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಈಶ್ವರಪ್ಪ ನ್ಯಾಯಾಧೀಶರೇ. ಯಡಿಯೂರಪ್ಪ ಜೈಲಿಗೆ ಹೋದಾಗ ಖುಷಿಪಟ್ಟ ನಿಮಗೆ ಕನಿಷ್ಠ ಕೃತಜ್ಞತೆ ಇಲ್ಲ.ಸೌಜನ್ಯಕ್ಕೂ ಜೈಲಿಗೆ ಭೇಟಿ‌ ಸಾಂತ್ವಾನ ಹೇಳಲಿಲ್ಲʻʻ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಪ್ರಮುಖರಾದ ಎಸ್.ಕೆ ಮರಿಯಪ್ಪ,ಧೀರರಾಜ್ ಹೊನ್ನವಿಲೆ ಸೇರಿದಂತೆ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News