ದ್ವೇಷ ಭಾಷಣ ಪ್ರಕರಣ | ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅಭಿಯೋಜಕರಾಗಿ ಎಸ್.ಬಾಲನ್ ನೇಮಕಕ್ಕೆ ಹೈಕೋರ್ಟ್ ತಡೆ

Update: 2024-04-08 11:07 GMT

ಬೆಂಗಳೂರು : ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸರಕಾರಿ ಅಭಿಯೋಜಕರಾಗಿ ಎಸ್.ಬಾಲನ್ ನೇಮಕಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮುಸ್ಲಿಂ ಮಹಿಳೆಯರ ಬಗ್ಗೆ ಹೇಳಿಕೆ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಭಿಯೋಜಕರಾಗಿ ಎಸ್.ಬಾಲಕೃಷ್ಣನ್ ಅವರನ್ನು ರಾಜ್ಯ ಸರಕಾರ ನೇಮಿಸಿತ್ತು. ಸರಕಾರದ ನೇಮಕ ಪ್ರಶ್ನಿಸಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅಭಿಯೋಜಕರಾಗಿ ಎಸ್.ಬಾಲನ್ ನೇಮಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿದೆ.

2023 ಡಿಸೆಂಬರ್ 24ರಂದು ಶ್ರೀರಂಗಪಟ್ಟಣದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ದೂರು ನೀಡಿದ್ದರು. ದೂರಿನ ಮೇರೆಗೆ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಯಲ್ಲಿ‌ ಪ್ರಭಾಕರ್ ಭಟ್ ವಿರುದ್ಧ IPC ಸೆಕ್ಷನ್ 354, 294, 509, 506, 153A, 295 295A, 298ರ ಅಡಿ ಎಫ್‌ಐಆರ್ ದಾಖಲಾಗಿದೆ.

ಈ ಎಫ್​ಐಆರ್ ರದ್ದು ಕೋರಿ ಪ್ರಭಾಕರ್ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಈ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ಸರಕಾರದ ಪರ ವಾದ ಮಂಡಿಸಲು ಅಭಿಯೋಜಕರಾಗಿ ಎಸ್.ಬಾಲಕೃಷ್ಣನ್ ನೇಮಕ ಮಾಡಿ ಸರಕಾರ ಆದೇಶಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News