ಕೆಎಎಸ್ ಪೂರ್ವಭಾವಿ ಪರೀಕ್ಷೆ | ಕೆಪಿಎಸ್ಸಿ ಹಠಕ್ಕೆ ಬಿದ್ದಿರುವುದು ಸರಿಯಲ್ಲ: ಎಚ್‍ಡಿಕೆ ಆಕ್ಷೇಪ

Update: 2024-08-15 12:21 GMT

ಬೆಂಗಳೂರು : ಕೆಪಿಎಸ್ಸಿ ಈ ತಿಂಗಳ 27ರಂದು 2023-24ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕೆಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ ಕೆಪಿಎಸ್ಸಿ ಹಟಕ್ಕೆ ಬಿದ್ದಿರುವುದು ಸರಿಯಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.

ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ ಕೆಪಿಎಸ್ಸಿಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು? ಅನೇಕ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ’ ಎಂದು ಗಮನ ಸೆಳೆದಿದ್ದಾರೆ.

‘ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ನಡೆಸುತ್ತಿರುವಂತೆ ಕಾಣುತ್ತಿದೆ. 4-5 ವರ್ಷಗಳಿಂದ ಕಷ್ಟಪಟ್ಟು ಓದಿರುವವರಿಗೆ ಅನ್ಯಾಯ ಮಾಡುವ ದುರಾಸೆ ಒಳ್ಳೆಯದಲ್ಲ. ಕಾಂಗ್ರೆಸ್ ಸರಕಾರ ಹಾಗೂ ಕೆಪಿಎಸ್ಸಿ ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಎಲ್ಲ ಆಯಾಮಗಳನ್ನು ಪರಿಶೀಲಿಸಿ ಎಲ್ಲ ಆಕಾಂಕ್ಷಿಗಳಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಿ’ ಎಂದು ಅವರು ಸಲಹೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News