ಹುಬ್ಬಳ್ಳಿ | ಯುವಕನ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ತಿರುವು: 20 ಕ್ಕೂ ಹೆಚ್ಚು ಜನರಿಂದ ಥಳಿತ, ಮತ್ತೊಂದು ವೀಡಿಯೊ ಬಹಿರಂಗ
ಹುಬ್ಬಳ್ಳಿ: ಯುವಕನೊಬ್ಬನನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿರುವ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, 20 ಕ್ಕೂ ಹೆಚ್ಚು ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಮತ್ತೊಂದು ವೀಡಿಯೊ ವೈರಲ್ ಆಗಿದೆ.
ಹಲ್ಲೆಗೊಳಗಾದ ಯುವಕನನ್ನು ಸಂದೀಪ್ ಎಂದು ಗುರುತಿಸಲಾಗಿದ್ದು, ಈತ ಇನ್ಸ್‌ಟಾಗ್ರಾಂನಲ್ಲಿ ಕೆಟ್ಟದಾಗಿ ಬೈದು ರೀಲ್ಸ್ ಮಾಡಿ ಹಾಕಿದ್ದ ಎಂದು ಆರೋಪಿಸಿ ಆತನ ಸ್ನೇಹಿತರೇ ಆದ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್,ಮಂಜು ಎಂಬುವರು ಹಲ್ಲೆ ಮಾಡಿದ್ದರು. ಈ ಸಂಬಂಧ ಮೂರು ದಿನಗಳ ಹಿಂದೆಯಷ್ಟೇ ಬೆಂಡಿಗೇರಿ ಠಾಣೆ ಪೊಲೀಸರು ಐದು ಜನರನ್ನು ಕೂಡ ಬಂಧಿಸಿದ್ದರು.
ಇದೀಗ ಹಲ್ಲೆಗೊಳಗಾದ ಯುವಕನ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, 20 ಕ್ಕೂ ಹೆಚ್ಚು ಯುವಕರ ಗುಂಪು ಸಂದೀಪ್ ಗೆ ಹಿಗ್ಗಾ ಮುಗ್ಗಾ ಥಳಿಸಿರುವುದು ಬೆಳಕಿಗೆ ಬಂದಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ, ಒಬ್ಬರು ಯುವಕನ ಕೂದಲನ್ನು ಹಿಡಿದುಕೊಂಡರೆ ಇನ್ನೊಬ್ಬರು ಹಿಂದಿನಿಂದ ಒದೆಯುವುದು, ಮತ್ತೊಬ್ಬರು ಬಡಿಯುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ.
ಇನ್ಸ್ಪೆಕ್ಟರ್ ವರ್ಗಾವಣೆ
ಯುವಕನ ಬೆತ್ತಲೆಗೊಳಿಸಿ, ಹಲ್ಲೆ ನಡೆಸಿದ ಪ್ರಕರಣ ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಘಟನೆಯಾಗಿದ್ದರೂ, ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಟಿ.ಬುಡ್ನಿ ಅವರನ್ನು ಮಹಿಳಾ ಪೊಲೀಸ್ ಠಾಣೆಗೆ ನಿಯೋಜನೆಗೊಳಿಸಿ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಆದೇಶಿಸಿದ್ದಾರೆ.