ನ.23ರ ನಂತರ ಕಾಂಗ್ರೆಸ್ ಆರೋಪಗಳ ಬಗ್ಗೆ ಮಾತನಾಡುತ್ತೇನೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಈಗ ನಾನು ಮಾತನಾಡುವುದಿಲ್ಲ. ಆದರೆ, ನ.23ರಂದು ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಮಾಡಿರುವ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ನಾನು ವಿಚಾರದ ಬಗ್ಗೆ ಈಗ ಮಾತನಾಡುವುದಿಲ್ಲ. ಈಗಾಗಲೇ ನಮ್ಮ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಮಾತನಾಡಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ, ಅಲ್ಲಿಯವರೆಗೂ ನಾನು ಮಾತನಾಡುವುದಿಲ್ಲ. 40 ಪರ್ಸೆಂಟ್ ಆರೋಪದ ಬಗ್ಗೆ ಯಾವುದು ಸತ್ಯ, ಯಾವುದು ಅಸತ್ಯ ಅನ್ನುವ ಬಗ್ಗೆ ನ.23ರ ನಂತರ ನಾನು ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕುರಿತು ವಸತಿ ಸಚಿವ ಝಮೀರ್ ಅಹ್ಮದ್ ನೀಡಿರುವ ಹೇಳಿಕೆ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಎಲ್ಲರಿಗೂ ಒಂದು ಗೌರವ ಇದ್ದೇ ಇರುತ್ತದೆ. ಶ್ರೀಮಂತ ಇರಲಿ, ಬಡವ ಇರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ. ಹಾಗಾಗಿ ಯಾರೂ ಯಾರನ್ನೂ ಕೊಂಡುಕೊಳ್ಳಲು ಆಗುವುದಿಲ್ಲ. ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.