ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ಶಾಸಕ ಮುನಿರತ್ನಗೆ ನೋಟಿಸ್
Update: 2023-07-14 17:54 GMT
ಬೆಂಗಳೂರು, ಜು.14: ಅಕ್ರಮವಾಗಿ ಬಂಡೆಗಳನ್ನು ಸ್ಫೋಟಿಸಿ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಾಸಕ ಎನ್.ಮುನಿರತ್ನ ಅವರಿಗೆ ಚಿಕ್ಕಜಾಲ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೆ, ಹಲವು ಷರತ್ತುಗಳನ್ನೂ ವಿಧಿಸಿದ್ದಾರೆ.
ಯಲಹಂಕ ತಹಶೀಲ್ದಾರ್ ಅನಿಲ್ ಅರೋಳಿಕರ್ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ದಾಖಲೆಗಳ ಪರಿಶೀಲನೆಗಾಗಿ ತನಿಖೆ ಮುಂದುವರಿಸಿದ್ದಾರೆ. ನೋಟಿಸ್ ಪ್ರತಿ ತಲುಪಿದ ಮೂರು ದಿನದೊಳಗಾಗಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕು. ಜಿಲಿಟಿನ್ ಕಡ್ಡಿ ಬಳಕೆ ಸಂಬಂಧ ತಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ, ನೋಟಿಸ್ ನೀಡಲಾಗಿದೆ.