ಕರ್ತವ್ಯದ ವೇಳೆ ಮೃತಪಟ್ಟ ಕೆಎಸ್ಸಾರ್ಟಿಸಿ ನೌಕರರ ಅವಲಂಬಿತರಿಗೆ ಪರಿಹಾರದ ಮೊತ್ತ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

Update: 2024-02-14 13:10 GMT

ಬೆಂಗಳೂರು: ಕೆಎಸ್ಸಾರ್ಟಿಸಿ ನೌಕರರ ಅವಲಂಬಿತರಿಗೆ ಅಪಘಾತ ಪರಿಹಾರ ವಿಮೆ 1ಕೋಟಿ ರೂ.ಹಾಗೂ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಸಹಿತ ಇತರೆ ಕಾರಣಗಳಿಂದ ಮೃತಪಟ್ಟ 16ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ಮೊತ್ತವನ್ನು 10ಲಕ್ಷ ರೂ. ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬುಧವಾರ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ನೌಕರರ ಕುಟುಂಬದ ಸದಸ್ಯರಿಗೆ ಪರಿಹಾರ ಮೊತ್ತ ವಿತರಿಸಿ ಮಾತನಾಡಿದ ಅವರು, ಸಂಸ್ಥೆಯ ಸಿಬ್ಬಂದಿಗಳ ಅವಲಂಬಿತರನ್ನು ಭೇಟಿ ಮಾಡಿ, ನಿಗಮವು 2 ತಿಂಗಳ ಹಿಂದಷ್ಟೆ ಪರಿಹಾರ ಮೊತ್ತ 3ಲಕ್ಷ ರೂ.ನಿಂದ 10ಲಕ್ಷ ರೂ.ಗೆ ಏರಿಕೆ ಮಾಡಿದ್ದು, ಇದರಿಂದ 16 ಕುಟುಂಬಗಳಿಗೆ ಆರ್ಥಿಕವಾಗಿ ಹೆಚ್ಚು ಹಣ ದೊರೆಯುವಂತಾಗಿದೆ. ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಸುಸೂತ್ರ ಜೀವನ ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಿದರು.

ನಿಗಮವು ತನ್ನ ಸಿಬ್ಬಂದಿಗಳ ಅವಲಂಭಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ 1 ಕೋಟಿ ರೂ.ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಇದುವರೆವಿಗೂ 12 ಜನ ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ ಎಂದು ವಿವರಿಸಿದರು.

ರಾಜೇಶ್ ಡಿ.ಸಿ. ಚಾಲಕ-ಕಂ-ನಿರ್ವಾಹಕ ಅರಕಲಗೂಡು ಘಟಕ, ಹಾಸನ ವಿಭಾಗ, ಇವರು 2023ರ ಆಗಸ್ಟ್ 29ರಂದು ಮೃತಪಟ್ಟಿರುತ್ತಾರೆ. ಮೃತರ ಅವಲಂಬಿತರಿಗೆ 1ಕೋಟಿ ರೂ.ಗಳ ಅಪಘಾತ ಪರಿಹಾರ ವಿಮಾ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್ಬಿಎಫ್ ಹಾಗೂ ಗಂಪು ವಿಮಾ ಯೋಜನೆಯಿಂದ 14,19,980 ರೂ.ಪರಿಹಾರವನ್ನು ನೀಡಲಾಯಿತು.

ಆದರೆ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗುವ ಸದುದ್ದೇಶದಿಂದ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದೆ ಎಂದು ನುಡಿದರು.

ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ (ವಾಸು), ಕರ್ತವ್ಯದಲ್ಲಿದ್ದ ವೇಳೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ 1 ಕೋಟಿ ರೂ.ಪರಿಹಾರ ಮೊತ್ತದ ಚೆಕ್ಕನ್ನು ಹಾಗೂ ಇತರೆ ಕಾರಣಗಳಿಂದ ಮೃತಪಟ್ಟಿದ್ದ 16 ಸಿಬ್ಬಂದಿಗಳ ಅವಲಂಬಿತರಿಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಲಾ 10 ಲಕ್ಷ ರೂ.ಗಳು ಹಾಗೂ ಅವರಿಗೆ ನಿಗಮದಿಂದ ಪಾವತಿಸಬೇಕಾದ ಭವಿಷ್ಯನಿಧಿ, ಉಪದನ ಚೆಕ್ಕನ್ನು ವಿತರಿಸಿದರು.

ಈ ವೇಳೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕಿ (ಸಿಬ್ಬಂದಿ ಮಾತ್ತು ಜಾಗೃತ) ಡಾ.ನಂದಿನಿದೇವಿ, ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News