ಪೆನ್ ಡ್ರೈವ್ ತೋರಿಸಿ ಹೆದರಿಸುವುದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ: ಎಚ್.ವಿಶ್ವನಾಥ್
ಮೈಸೂರು: ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಮಾಜಿ ಪ್ರಧಾನಿಗಳ ಮಗನಾಗಿ ಜೇಬಿನಲ್ಲಿ ಪೆನ್ ಡ್ರೈವ್ ಇಟ್ಟುಕೊಂಡು ಇದನ್ನು ಹೊರಗೆ ಬಿಡುತ್ತೇನೆ ಎಂದು ತೋರಿಸಿ ಹೆದರಿಸುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶೋಭಾಯಮಾನವಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಪೆನ್ ಡ್ರೈವ್ ಇಟ್ಟುಕೊಂಡು ಇದರಲ್ಲಿ ಹಲವು ದಾಖಲೆಗಳಿವೆ ಎಂದು ಹೆದರಿಸುವುದು ಓರ್ವ ದೊಡ್ಡ ರಾಜಕಾರಣಿಗೆ ಗೌರವ ತರುವುದಿಲ್ಲ. ಅದೇನಿದೆ ಎಂಬುದನ್ನು ಕೂಡಲೇ ಹೊರಗೆ ಬಿಡಲಿ ಎಂದು ಹೇಳಿದರು.
ಕುಮಾರಸ್ವಾಮಿ ಹೇಳಿಕೆ ಮತ್ತು ನಡವಳಿಕೆಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಹಬ್ಬಾಸ್ ಕುಮಾರಸ್ವಾಮಿ ಎಂದು ಹೇಳಿದ್ದಾರೆ.ಇದರ ಅರ್ಥ ನಾವಿಬ್ಬಿರು ಒಟ್ಟಿಗೆ ಸೇರಿದ್ದೀವಿ ಎಂದು. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.
ಈಶ್ವರಪ್ಪಗೆ ತಿರುಗೇಟು:
ಇತ್ತೀಚೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಿಂದ ಬಂದ 17 ಜನರಿಂದ ಬಿಜೆಪಿ ಹಾಳಾಯಿತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ಬಿಜೆಪಿಗೆ ಹೋದ 17 ಜನರೇ ಹಾಳದರು. ಮಂತ್ರಿಯಾಗಿ ಈಶ್ವರಪ್ಪ ಎಲ್ಲಾ ರೀತಿಯ ಸುಖ ಅನುಭವಿಸಿ ನಂತರ ರಾಜೀನಾಮೆ ನೀಡಿದರು. ಆದರೆ ಈಗ ಈ ರೀತಿ ಮಾತನಾಡುತ್ತಿದ್ದಾರೆ.ಇದೊಂತರ ಅವರಿಗೆ ಬಾಯಿ ಚಪಲ ಎಂದು ಟೀಕಿಸಿದರು.