ಜೆಡಿಎಸ್-ಬಿಜೆಪಿ ಹೊಂದಾಣಿಕೆ; ಕುರುಡನ ಹೆಗಲ ಮೇಲೆ ಕುಂಟನ ಸವಾರಿ: ಕಾಂಗ್ರೆಸ್ ಲೇವಡಿ

Update: 2023-07-21 17:14 GMT

ಬೆಂಗಳೂರು, ಜು. 21: ‘ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು ‘ಕುರುಡನ ಹೆಗಲ ಮೇಲೆ ಕುಂಟನ ಸವಾರಿ’ಯಂತಿದೆ. ಇತ್ತ ಜೆಡಿಎಸ್ ಕೋಮುವಾದಿಗಳ ಸಂಘ ಮಾಡಿದ್ದು ಮತಿಗೇಡಿತನ’ ಎಂದು ಕಾಂಗ್ರೆಸ್ ಪಕ್ಷ ಇಂದಿಲ್ಲಿ ಲೇವಡಿ ಮಾಡಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ. ನಾಯಕತ್ವವಿಲ್ಲದ ಬಿಜೆಪಿ ಜೆಡಿಎಸ್‍ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು’ ಎಂದು ವಾಗ್ದಾಳಿ ನಡೆಸಿದೆ.

‘ಹೊಸ ರಾಜಕೀಯ ಸಮ್ಮಿಶ್ರಣವೊಂದು ತಯಾರಾಗುತ್ತಿದೆ. ಈಗ ನಮಗಿರುವ ಪ್ರಶ್ನೆ, ಜೆಡಿಎಸ್ ಕೋಮುವಾದವನ್ನು ಅಳವಡಿಸಿಕೊಳ್ಳುತ್ತದೆಯೇ ಅಥವಾ ಬಿಜೆಪಿ ಜಾತ್ಯತೀತತೆಯನ್ನು ಅಳವಡಿಸಿಕೊಳ್ಳುತ್ತದೆಯೇ?. ಬೆಳವಣಿಗೆಗಳನ್ನು ನೋಡುತ್ತಿದ್ದರೆ ಜೆಡಿಎಸ್ ಕೋಮುವಾದ ಸಿದ್ಧಾಂತಕ್ಕೆ ಬದಲಾಗುತ್ತಿರುವುದು ಕಾಣುತ್ತಿದೆ, ಥೇಟ್. ನಾಗವಲ್ಲಿಯ ತರ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

‘ಬಿಜೆಪಿಗೆ ದಲಿತರ ರಾಜಕೀಯ ಹಾಗೂ ಸಾಮಾಜಿಕ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ?, ದಲಿತರ ತಲೆ ಮೇಲೆ ಚಡ್ಡಿ ಹೊರಿಸಿತ್ತು ಬಿಜೆಪಿ, ಎಸ್ಸಿಪಿ-ಟಿಎಸ್ಪಿ ಹಣವನ್ನು ದುರುಪಯೋಗ ಮಾಡಿತ್ತು ಬಿಜೆಪಿ, ದಲಿತರಿಗೆ ಮಾತ್ರ ಚಪ್ಪಲಿ ಕಾಯುವ ಟೆಂಡರ್ ಮೀಸಲಿಟ್ಟಿತ್ತು ಬಿಜೆಪಿ, ಸೆಂಟ್ರಲ್ ವಿಸ್ತಾ, ರಾಮಮಂದಿರದ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ ಬಿಜೆಪಿ, ಈಗ ದಲಿತ ಸಮುದಾಯದ ಉಪಸಭಾಪತಿಯ ಮುಖಕ್ಕೆ ಪೇಪರ್ ಎಸೆದು ಅವಮಾನಿಸಿದೆ ಬಿಜೆಪಿ, ದಲಿತರನ್ನು ಬಿಜೆಪಿ ಏಕಿಷ್ಟು ಕೇವಲವಾಗಿ ಕಾಣುತ್ತಿದೆ? ಮನುವಾದವೇ ಬಿಜೆಪಿಯ ಪಕ್ಷದ ಬೈಲಾ ಆಗಿದೆಯೇ?’ ಎಂದು ಕಾಂಗ್ರೆಸ್ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News