ಕನಕಪುರ: ವೇತನ ವಿಳಂಬ ಖಂಡಿಸಿ ಮೈಮೇಲೆ ಸೆಗಣಿ ಸುರಿದು ಪ್ರತಿಭಟಿಸಿದ ಪೌರ ಕಾರ್ಮಿಕರು
ಕನಕಪುರ, ಆ.22: 15 ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಎದುರು ಪೌರಕಾರ್ಮಿಕರು ಮೈಮೇಲೆ ಸೆಗಣಿ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚಿಕ್ಕ ತಿರುಪತಿ ಎಂದೇ ಖ್ಯಾತಿ ಹೊಂದಿರುವ ಕಲ್ಲಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಗಯ್ಯ ಹಾಗೂ ಸುರೇಶ ಎಂಬವವರಿಗೆ 15 ತಿಂಗಳ ವೇತನ ಬಾಕಿ ಇತ್ತು ಎನ್ನಲಾಗಿದ್ದು, ಈ ಹಣವನ್ನು ನೀಡದೆ ಪಂಚಾಯತ್‌ನ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಬೆಳಗ್ಗೆ ನೀರಿಗೆ ಹಸುವಿನ ಸೆಗಣಿ ಕಲಸಿ ಮೈಮೇಲೆ ಸುರಿದಿದ್ದಾರೆ. ತಮ್ಮ ಸಂಪೂರ್ಣ ವೇತನ ನೀಡುವವರೆಗೂ ಸ್ಥಳದಲ್ಲೇ ಕುಳಿತುಕೊಳ್ಳುವುದಾಗಿ ಪೌರಕಾರ್ಮಿಕರು ತಿಳಿಸಿದ್ದಾರೆ.
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಎನ್.ನವೀನ್, ಪದಾಧಿಕಾರಿಗಳಾದ ಶೇಖರ್ ಪಟೇಲ್, ರಾಮಕೃಷ್ಣ ನಾಯ್ಕ, ಅರುಣ್‌ಗೌಡ ಹಲವರು ಹಾಜರಿದ್ದರು.
ಸ್ಥಳದಲ್ಲಿಯೇ ಬಾಕಿ ವೇತನ ಪಾವತಿ
ಕಲ್ಲಹಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಇಬ್ಬರು ಪೌರಕಾರ್ಮಿಕರು ಬಾಕಿ ಇರುವ ವೇತನಕ್ಕೆ ಆಗ್ರಹಿಸಿ ಸಗಣಿ ಸುರಿದು ಪ್ರತಿಭಟನೆ ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ ಧಾವಿಸಿ ಕಾರ್ಮಿಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಒಪ್ಪದೇ ಇದ್ದಾಗ ಇಬ್ಬರಿಗೆ ಬಾಕಿ ಉಳಿದಿದ್ದ 3 ಲಕ್ಷದ 20 ಸಾವಿರ ರೂಪಾಯಿ ಬಾಕಿ ವೇತನದಲ್ಲಿ 1 ಲಕ್ಷ ನಗದು ಮತ್ತು ಉಳಿದ ಹಣಕ್ಕೆ ಇಬ್ಬರಿಗೂ ಚೆಕ್ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ, ಮಾಜಿ ಅಧ್ಯಕ್ಷೆ ಶೀಲಾ ವೇಣುಕುಮಾರ್, ಸದಸ್ಯರಾದ ಮಂಜುನಾಥ್, ಶ್ವೇತ ಜಯಶಂಕರ್, ಮುತ್ತುರಾಜು, ಕರವಸೂಲಿಗಾರ ಚಂದ್ರು ಹಾಜರಿದ್ದರು.