‘ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಿ.ಟಿ.ರವಿ ನಿಂದನೆ’: ಉನ್ನತ ಮಟ್ಟದ ತನಿಖೆ ನಡೆಸಲು ಸಭಾಪತಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ

Update: 2024-12-21 14:49 GMT

ಸಿ.ಟಿ. ರವಿ 

ಬೆಂಗಳೂರು, ಡಿ.21: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅಸಭ್ಯ ಮತ್ತು ಅಸಾಂವಿಧಾನಿಕ ಪದ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತಮಟ್ಟದ ತನಿಖೆಗೆ ಆದೇಶೀಸುವಂತೆ ಸಭಾಪತಿ ಬಸವರಾಜ ಹೊರಟ್ಟಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸಭಾಪತಿಗೆ ಪತ್ರ ಬರೆದಿರುವ ನಾಗಲಕ್ಷ್ಮೀ ಚೌಧರಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19ರಂದು ವಿಧಾನಪರಿಷತ್ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಪರಿಷತ್ ಸದಸ್ಯ ಸಿ.ಟಿ.ರವಿ ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ತಿಳಿಸಿದ್ದಾರೆ.

ಮಾಜಿ ಮಂತ್ರಿಯಾಗಿ, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದಾರೆ. ಇದು ನಾಡಿನ ಇಡೀ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನವಾಗಿದೆ. ಹೀಗಾಗಿ, ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕೆಂದು ನಾಗಲಕ್ಷ್ಮೀ ಚೌಧರಿ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News