ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಕುಮಾರಸ್ವಾಮಿ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು
ಮೈಸೂರು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಿಗರು ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದೆ.
ʼಅಕ್ಟೋಬರ್ 26 ಮತ್ತು27 ರಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರ ಆಧಾರ ರಹಿತ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದರಿಂದ,ಕುಮಾರಸ್ವಾಮಿ ರವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಕೆಪಿಸಿಸಿ ವಕ್ತಾರನಾದ ನನಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ.ಹಾಗೂ ನಮ್ಮ ಮನೆಗೆ ಮುತ್ತಿಗೆ ಹಾಕಲು ಮತ್ತು ಒಂಟಿಯಾಗಿದ್ದಾಗ ನನ್ನನ್ನು ಅಟ್ಯಾಕ್ ಮಾಡಲು ಅಕ್ಟೋಬರ್ 28 ರ ಶನಿವಾರ ಬೆಳಿಗ್ಗೆ ಕೆಲವರು ಕಲಾಮಂದಿರದ ಮುಂದೆ ಮಾತನಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮ ಜರುಗಿಸಬೇಕುʼ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರಿಗೆ ದೂರು ನೀಡಿದ್ದಾರೆ.
ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾರ್ಯದರ್ಶಿ ಶಿವಣ್ಣ, ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಹೆಡತಲೆ ಮಂಜುನಾಥ್, ಎನ್.ಆರ್.ನಾಗೇಶ್, ಉತ್ತನಹಳ್ಳಿ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.