ನಟ ಶಿವರಾಜ್‍ಕುಮಾರ್ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್: ಕುಮಾರ್ ಬಂಗಾರಪ್ಪ ನಿವಾಸಕ್ಕೆ ಅಭಿಮಾನಿಗಳಿಂದ ಮುತ್ತಿಗೆ

Update: 2024-06-08 15:29 GMT

ಕುಮಾರ್ ಬಂಗಾರಪ್ಪ

ಬೆಂಗಳೂರು: ಚಿತ್ರನಟ ಶಿವರಾಜ್‍ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದ ಹಿನ್ನೆಲೆ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರದ ಮನೆಗೆ ಶಿವರಾಜ್‍ಕುಮಾರ್ ಅಭಿಮಾನಿಗಳು ಶನಿವಾರ ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಸೋತ ಬೆನ್ನಲ್ಲೇ ನಟ ಶಿವರಾಜಕುಮಾರ್ ಅವರ ಬಗ್ಗೆ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರು ಲಘುವಾಗಿ ಬರೆದು ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು.

ಈ ಬಗ್ಗೆ ಆಕ್ರೋಶಗೊಂಡ ನಟ ಶಿವರಾಜಕುಮಾರ್ ಅವರ ಅಭಿಮಾನಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್‍ಬಂಗಾರಪ್ಪ ನಿವಾಸದ ಗೇಟ್ ಒಳಗೆ ನುಗ್ಗಿ ಧಿಕ್ಕಾರ ಕೂಗಿದರು.

ನಟ ಶಿವರಾಜಕುಮಾರ್ ಅವರ ಬಗ್ಗೆ, ರಾಜಕುಮಾರ್ ಕುಟುಂಬದ ಬಗ್ಗೆ ಲಘುವಾಗಿ ಮಾತಾಡಿರುವುದು ನಮಗೆ ನೋವಾಗಿದೆ. ಕುಮಾರ್ ಬಂಗಾರಪ್ಪ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯಿಂದ ಹೊರಗೆ ಹೋಗುವಂತೆ ಮನವಿ ಮಾಡಿದರು. ಈ ವೇಳೆ ಅಭಿಮಾನಿಗಳು ಮತ್ತು ಪೊಲೀಸರ ಮಾತಿನ ಚಕಮಕಿ ಏರ್ಪಟ್ಟು ಪೊಲೀಸರು ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡರು...

ಕುಮಾರ್ ಬಂಗಾರಪ್ಪ ಪೋಸ್ಟ್ ನಲ್ಲಿ ಏನಿದೆ: ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಈ ರೀತಿ ಇದ್ದು, ‘ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು. ಅಲ್ಲದೆ, ನನ್ನ ತಂಗಿ (ಗೀತಾ ಶಿವರಾಜ್‍ಕುಮಾರ್) ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು.

ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೊಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು. ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು’ ಎಂದು ಲಘುವಾಗಿ ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News