ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಾಯಕರ ಪ್ರತಿಭಟನೆಗೆ ಕುಮಾರಸ್ವಾಮಿ ಸಾಥ್; ಪೊಲೀಸ್ ವಶಕ್ಕೆ

Update: 2023-07-19 18:17 GMT

ಬೆಂಗಳೂರು, ಜು.19: ವಿಧಾನಸಭೆಯಲ್ಲಿ ಅಸಭ್ಯ ವರ್ತನೆ ಹಿನ್ನೆಲೆ ಬಿಜೆಪಿಯ ಹತ್ತು ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದ ಹಿನ್ನೆಲೆ ಅಮಾನತುಗೊಂಡ ಶಾಸಕರನ್ನು ಮಾರ್ಷಲ್‍ಗಳು ಹೊತ್ತೊಯ್ದು ಹೊರ ಹಾಕಿದರು. ಈ ವೇಳೆ ಕೆಲಕಾಲ ತೀವ್ರ ನೂಕಾಟ, ತಳ್ಳಾಟ ಉಂಟಾಗಿ ರಣರಂಗವಾಗಿ ಬದಲಾಗಿತ್ತು.

ಬುಧವಾರ ಸಂಜೆ ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ನಿರ್ಣಯ ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯ ಸಭಾಂಗಣ ಬಳಿಯಿರುವ ಸ್ಪೀಕರ್ ಕಚೇರಿ ಎದುರು ಧರಣಿ ಕುಳಿತಿದ್ದರು. ಈ ವೇಳೆ ಮಾರ್ಷಲ್‍ಗಳು ಅಮಾನತುಗೊಂಡ ಶಾಸಕರನ್ನು ಹೊತ್ತೊಯ್ಯಲು ಪ್ರಯತ್ನಿಸಿದಾಗ ಮಾರ್ಷಲ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಜತೆಗೆ, ವಿಧಾನಸಭೆ ಪ್ರವೇಶ ದ್ವಾರದ ಗಾಜು ಪುಡಿ ಪುಡಿಯಾಯಿತು.

ಇನ್ನೂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು, ಬಿಜೆಪಿ ಶಾಸಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿ ಬಿಜೆಪಿ ಸದಸ್ಯರೊಂದಿಗೆ ಧರಣಿ ಕುಳಿತರು.

ವಶಕ್ಕೆ: ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕರಾದ ಡಾ.ಅಶ್ವತ್ಥ ನಾರಾಯಣ, ಆರ್.ಅಶೋಕ್, ಸುರೇಶ್ ಕುಮಾರ್, ವಿ.ಸುನೀಲ್ ಕುಮಾರ್, ಮುನಿರತ್ನ, ಅರವಿಂದ್ ಬೆಲ್ಲದ್, ಮಹೇಶ್ ಟೆಂಕಿನಕಾಯಿ, ಡಿ.ಮುನಿರಾಜು, ಚನ್ನಬಸಪ್ಪ, ಜ್ಯೋತಿ ಗಣೇಶ್, ಸಿ.ಕೆ.ರಾಮಮೂರ್ತಿ ಸೇರಿದಂತೆ ಹಲವರು ಶಾಸಕರನ್ನು ವಶಕ್ಕೆ ಪಡೆದ ಪೊಲೀಸರು ಬಿಎಂಟಿಸಿ ಬಸ್‍ನಲ್ಲಿ ಕರೆದೊಯ್ದರು.

ಪ್ರಜಾಪ್ರಭುತ್ವ ಕಗ್ಗೊಲೆ: ‘ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಕಲಾಪದಿಂದ ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ. ಸ್ಪೀಕರ್ ಯು.ಟಿ.ಖಾದರ್ ಅವರು ಉದ್ದೇಶಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿಯ ಸನ್ನೆ ಮೇರೆಗೆ ಸ್ಪೀಕರ್ ಹುಡುಗಾಟಿಕೆ ಮಾಡಿದ್ದಾರೆ’ ಎಂದು ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ರಾಜ್ಯ ಸರಕಾರ ಸರ್ವಾಧಿಕಾರಿ, ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಸ್ಪೀಕರ್ ಕುರ್ಚಿಯನ್ನೂ ದುರ್ಬಳಕೆ ಮಾಡಿಕೊಂಡು ಬಿಜೆಪಿ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇದೊಂದು ಕರಾಳ ದಿನವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ’ ಎಂದು ಆರೋಪಿಸಿದರು.

ಅಧಿಕಾರಿಗಳ ನಿಯೋಜನೆ, ಉಭಯ ಸದನಗಳಲ್ಲಿ ಧರಣಿ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪ್ರತಿಪಕ್ಷಗಳ ‘ಇಂಡಿಯಾ’ ಒಕ್ಕೂಟದ ಸದಸ್ಯರ ಆತಿಥ್ಯಕ್ಕಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದು, ಸದನದ ಬಾವಿಗಿಳಿದು ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ನಡುವೆ ಏರಿದ ದನಿಯಲ್ಲಿ ವಾಗ್ವಾದ ಜರುಗಿತು.

ಬುಧವಾರ ಬೆಳಗ್ಗೆ ಸದನ ಸಮಾವೇಶಗೊಳ್ಳುತ್ತಿದ್ದಂತೆ ಬಿಜೆಪಿಯ ಹಿರಿಯ ಶಾಸಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿದರು. ಈ ವಿಚಾರದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿ ಸದನದಲ್ಲಿ ಕಾವೇರಿದ ಸನ್ನಿವೇಶ ಸೃಷ್ಟಿಯಾಯಿತು.ಬಿಜೆಪಿ ಸದಸ್ಯರು ಸರಕಾರದ ಧೋರಣೆ ವಿರೋಧಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿ ಘೋಷಣೆ ಆಕ್ರೋಶ ಹೊರಹಾಕಿದರು.

ಇದಕ್ಕೂ ಮುನ್ನ ಬಿಜೆಪಿ ಸದಸ್ಯರದ ಅಶೋಕ್, ಸುರೇಶ್ ಕುಮಾರ್, ಸುನೀಲ್ ಕುಮಾರ್ ಪ್ರಸ್ತಾಪಿಸಿ ಜಾಮೀನಿನ ಮೇಲೆ ಇರುವವರಿಗೆ ಅಧಿಕಾರಿಗಳು ಆತಿಥ್ಯ ನೀಡಿದ್ದಾರೆ. ಇದು ಸರಕಾರಿ ಕಾರ್ಯಕ್ರಮವಲ್ಲ, ರಾಜಕೀಯ ಕಾರ್ಯಕ್ರಮ. ರಾಜ್ಯದ ಏಳು ಕೋಟಿ ಜನರ ತೆರಿಗೆ ಪಾವತಿ ಹಣವನ್ನು ಈ ರೀತಿ ಬಳಕೆ ಮಾಡಬಾರದು. ರಾಜಕೀಯ ನಾಯಕರನ್ನು ಐಎಎಸ್ ಅಧಿಕಾರಿಗಳು ಹೋಟೆಲ್‍ಗೆ ಕರೆದುಕೊಂಡು ಹೋಗಲು ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಟೀಕಿಸಿದರು.

ಈ ಪ್ರಸ್ತಾಪಕ್ಕೆ ಉತ್ತರಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಹೊರರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಕೇಂದ್ರ ಮತ್ತು ರಾಜ್ಯದ ಅಧಿಕಾರಿದಲ್ಲಿದ್ದು, ಬಂದವರಿಗೆ ಶಿಷ್ಟಾಚಾರದಂತೆ ಯಾವ ಗೌರವ ಕೊಡಬೇಕೋ ಕೊಟ್ಟಿದ್ದೇವೆ. ನಾವು ಶಿಷ್ಟಾಚಾರವನ್ನು ಉಲ್ಲಂಘಿಸಿಲ್ಲ. ನಮ್ಮ ಪಕ್ಷದಲ್ಲಿ ನಾಯಕರ, ಕಾರ್ಯಕರ್ತರ ಕೊರತೆ ಇಲ್ಲ. ನಮ್ಮ ನಾಯಕರಿಗೆ ಅಧಿಕಾರಿಗಳಿಂದ ಆತಿಥ್ಯ ಬೇಕಿಲ್ಲ ಎಂದರು.

ಆದರೂ ಪಟ್ಟುಬಿಡದ ಬಿಜೆಪಿ ಸದಸ್ಯರು ಹಾಗೂ ಆಡಳಿತ ಪಕ್ಷದ ಶಾಸಕರು ಏರಿದ ದನಿಯಲ್ಲಿ ವಾಗ್ವಾದಕ್ಕೆ ಇಳಿದರು. ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್ ಇತರರು ಬಿಜೆಪಿಯ ಧೋರಣೆಯನ್ನು ತೀವ್ರವಾಗಿ ಆಕ್ಷೇಪಿಸಿ ಮಾತನಾಡಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಏರಿದ ದನಿಯಲ್ಲಿ ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು.

ಬಿಜೆಪಿ ಸದಸ್ಯರು ಸರಕಾರದ ಧೋರಣೆಯನ್ನು ವಿರೋಧಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿಸಿ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಪದೇ ಪದೇ ಮಾಡಿಕೊಂಡ ಮನವಿಗೆ ಸ್ಪಂದಿಸದೆ ಇದ್ದಾಗ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು 10 ನಿಮಿಷ ಮುಂದೂಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News