ವಯನಾಡ್‌ನಲ್ಲಿ ಭೂಕುಸಿತ | ಕೇರಳಕ್ಕೆ ಅಗತ್ಯವಿರುವ ನೆರವನ್ನು ರಾಜ್ಯ ಸರ್ಕಾರ ನೀಡಲಿದೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಭಾರಿ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇವಲ 4 ಗಂಟೆಗಳ ಅಂತರದಲ್ಲಿ ಸಂಭವಿಸಿದ ಮೂರು ಭೂ ಕುಸಿತಗಳಿಂದ ಇಲ್ಲಿಯವರೆಗೆ ಕನಿಷ್ಠ 70 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಮೆಪ್ಪಾಡಿ ಬಳಿಯ ಗಿರಿ ಶ್ರೇಣಿಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವಾರು ರಕ್ಷಣಾ ತಂಡಗಳು ತೊಡಗಿಕೊಂಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, "ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ" ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಗಳಿಗೆ ಸಕಲ ನೆರವು : ಕೇರಳದ ವಯನಾಡು ಬಳಿ ಉಂಟಾಗಿರುವ ಭೀಕರ ಭೂಕುಸಿತದಿಂದ ಅನೇಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಇನ್ನು ಅನೇಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತುರ್ತಾಗಿ ಸ್ಪಂದಿಸಿದ್ದು, ಕೇರಳದ ಮುಖ್ಯಮಂತ್ರಿಗಳ ಜತೆ ಮಾತನಾಡಿ, ರಕ್ಷಣಾ ಕಾರ್ಯಗಳಿಗೆ ಸಕಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಎಲ್ಲಾ ಕುಟುಂಬಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಕೇರಳ ಸೇರಿ ದೇಶದೆಲ್ಲೆಡೆ ಭಾರೀ ಮಳೆ ಆಗುತ್ತಿದ್ದು, ಭೂಕುಸಿತ, ನೆರೆ ಉಂಟಾಗಿದೆ. ಕರ್ನಾಟಕದಲ್ಲಿಯೂ ಅನೇಕ ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರಿಕೆ ವಹಿಸಬೇಕು ಹಾಗೂ ರಾಜ್ಯ ಸರಕಾರವೂ 24X7 ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟು, ಅಪಾಯವಿರುವ ಸ್ಥಳಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
ಕೇರಳದ ವಯನಾಡು ಬಳಿ ಉಂಟಾಗಿರುವ ಭೀಕರ ಭೂಕುಸಿತದಿಂದ ಅನೇಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಇನ್ನು ಅನೇಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರು ತುರ್ತಾಗಿ ಸ್ಪಂದಿಸಿದ್ದು, ಕೇರಳದ ಮುಖ್ಯಮಂತ್ರಿಗಳ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 30, 2024