ಲೋಕಸಭಾ ಚುನಾವಣೆ | 224 ಮಾದರಿ ಮತಗಟ್ಟೆಗಳ ಸ್ಥಾಪನೆ : ಮುಖ್ಯ ಚುನಾವಣಾಧಿಕಾರಿ

Update: 2024-05-05 15:02 GMT

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ 560 ಮತಗಟ್ಟೆಗಳನ್ನು ಮಹಿಳೆಯರು, 112 ಮತಗಟ್ಟೆಗಳನ್ನು ದಿವ್ಯಾಂಗರು ನಿರ್ವಹಿಸುತ್ತಾರೆ ಮತ್ತು 224 ಇತರೆ ವಿಷಯಗಳ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳನ್ನು ಸ್ಥಳೀಯ ಸಂಸ್ಕೃ ತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ ಅಲಂಕರಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮತಗಟ್ಟೆಗಳಲ್ಲಿ ಎಲ್ಲ ಕನಿಷ್ಠ ಸೌಲಭ್ಯಗಳಾದ ರಾಂಪ್ ಸೌಲಭ್ಯ, ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮತ್ತು ಮತದಾರರಿಗೆ ಸಹಾಯವಾಗಲು ಸಂಕೇತ ಫಲಕಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿವ್ಯಾಂಗ ಮತ್ತು ಹಿರಿಯ ನಾಗರಿಕ ಮತದಾರರಿಗೆ ಸಹಾಯ ಮಾಡಲು ಸಹಾಯಕರು ಲಭ್ಯವಿರುತ್ತಾರೆ. ಮತಗಟ್ಟೆಯ ಅಕ್ಕಪಕ್ಕದ ಕೊಠಡಿಗಳನ್ನು ವಿಶ್ರಾಂತಿ ಕೊಠಡಿಗಳನ್ನಾಗಿ ಮಾರ್ಪಡಿಸಿ ಸಿದ್ಧವಿರಿಸಲಾಗಿದೆ. ವಿಶ್ರಾಂತಿ ಕೊಠಡಿಗಳು ಲಭ್ಯವಿಲ್ಲದೆ ಇರುವ ಕಡೆ ಮತಗಟ್ಟೆ ಆವರಣದಲ್ಲಿ ಶಾಮಿಯಾನ, ಫ್ಯಾನ್ ಮತ್ತು ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮತಗಟ್ಟೆ ಆವರಣದಲ್ಲಿ ಶೂಶ್ರೂಷಕರು, ಆಶಾ ಕಾರ್ಯಕರ್ತರೊಂದಿಗೆ ಓಆರ್ ಎಸ್, ವೈದ್ಯಕೀಯ ಕಿಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯ ಸೌಲಭ್ಯವಿರುತ್ತದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಮತದಾರರಿಗೆ ನೀಡಲಾಗಿರುವ ಮತದಾರರ ಚೀಟಿಗಳಲ್ಲಿ ಮತದಾನ ಹಾಗೂ ಮತಗಟ್ಟೆಗಳ ಕುರಿತು ಸೂಚನೆಗಳು ಮತ್ತು ಗೂಗಲ್ ನಕ್ಷೆಗಳ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮತದಾರರ ಮಾಹಿತಿ ಸ್ಲಿಪ್‍ಗಳು ಕ್ಯೂಆರ್ ಕೋಡ್ ಅನ್ನು ಒಳಗೊಂಡಿರುತ್ತವೆ. ಇದನ್ನು ಸ್ಕ್ಯಾನ್ ಮಾಡಿದಾಗ ಕ್ಯೂಆರ್ ಕೋಡ್ ಗೂಗಲ್ ನಕ್ಷೆಗಳ ಮೂಲಕ ಮತದಾನ ಕೇಂದ್ರ ತಲುಪಲು ಸಹಾಯ ಮಾಡುತ್ತದೆ. ಎಲ್ಲ ಮತದಾರರು ಮೇ 7ರಂದು ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸುವಂತೆ ಅವರು ವಿನಂತಿಸಿದ್ದಾರೆ.

ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 2,301 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 3,384 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 5,565 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 193 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 34,530 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 2,071 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 47.47 ಲಕ್ಷ ರೂ.ಮೌಲ್ಯದ 750 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News