ಕರ್ನಾಟಕದಲ್ಲಿ ಗ್ಯಾರಂಟಿ ಅನುಷ್ಠಾನದ ಬಗ್ಗೆ ʼಮಹಾಯುತಿʼ ನಾಯಕರು ಅಧ್ಯಯನ ಮಾಡಲಿ : ಡಿ.ಕೆ.ಶಿವಕುಮಾರ್

Update: 2024-11-09 10:10 GMT

ಮುಂಬೈ: "ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸವಾಲು ಹಾಕಿದರು.

ಮುಂಬೈನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.

"ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ." ಎಂದು ಸವಾಲು ಹಾಕಿದರು.

ರಾಜ್ಯದ ಜಿಡಿಪಿ ಏರಿಕೆ :

"ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ ಕರ್ನಾಟಕದ ಜಿಡಿಪಿ ಶೇ 8.2 ರಷ್ಟಿತ್ತು. ಈಗ ಶೇ 10.2 ರಷ್ಟಿದೆ. ಇದು ನನ್ನ ಲೆಕ್ಕಾಚಾರವಲ್ಲ, ಭಾರತ ಸರಕಾರದ ವಿವಿಧ ಸಂಸ್ಥೆಗಳ ಲೆಕ್ಕಾಚಾರ" ಎಂದು ಹೇಳಿದರು.

ಸುಳ್ಳಿನ ವಿರುದ್ಧ ಕಾನೂನಾತ್ಮಕ ಹೋರಾಟ :

"ಗ್ಯಾರಂಟಿ ವಿಚಾರವಾಗಿ ಸುಳ್ಳು ಹಬ್ಬಿಸಿದ ಪಕ್ಷಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವ ಕುರಿತು ನಾವು ಯೋಚನೆ ಮಾಡುತ್ತಿದ್ದೇವೆ. ನುಡಿದಂತೆ ನಡೆದ ನಮ್ಮ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ದೇಶದ ಮಹಾನ್ ಸುಳ್ಳುಗಾರರು" ಎಂದು ಕಿಡಿಕಾರಿದರು.

ಬಿಜೆಪಿಯಿಂದ ಗ್ಯಾರಂಟಿ ಯೋಜನೆಗಳ ನಕಲು :

"ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರು ಹಾಗೂ ಅನೇಕ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಿದ್ದರು. ಆದರೆ ಈಗ ಅವರೇ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಭರವಸೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಹೆಮ್ಮೆ. ಬಿಜೆಪಿ ನಮ್ಮಿಂದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದೆ" ಎಂದು ತಿರುಗೇಟು ನೀಡಿದರು.

52 ಸಾವಿರ ಕೋಟಿ ರೂ.ನಿಂದ 56 ಸಾವಿರ ಕೋಟಿ ರೂ.ಗೆ ಏರಿಕೆ :

"136 ಸ್ಥಾನಗಳನ್ನು ಗೆದ್ದು ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಗ್ಯಾರಂಟಿಗಳ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಇದುವರೆಗೂ ಶಕ್ತಿ ಯೋಜನೆಯಡಿ 336 ಕೋಟಿ ಟ್ರಿಪ್ ಗಳನ್ನು ಮಹಿಳೆಯರು ಸಂಚರಿಸಿದ್ದಾರೆ. 7,892 ಕೋಟಿ ಹಣವನ್ನು ಇದಕ್ಕೆ ಖರ್ಚು ಮಾಡಲಾಗಿದೆ. 1.22 ಕೋಟಿ ಮಹಿಳೆಯರಿಗೆ ಗೃಹಲಕ್ಷೀ ಹಣ ನೀಡಲಾಗುತ್ತಿದೆ. 1.65 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಸೌಲಭ್ಯ ನೀಡುತ್ತಿದ್ದು 10,259 ಕೋಟಿ ರೂ. ಹಣ ವಿನಿಯೋಗಿಸಲಾಗಿದೆ. 1.78 ಲಕ್ಷ ಯುವಕರಿಗೆ ಯುವನಿಧಿಯನ್ನು ನೀಡುತ್ತಿದ್ದೇವೆ. ಇದಕ್ಕಾಗಿ 147 ಕೋಟಿ ಹಣ ಹಾಗೂ ಅನ್ನಭಾಗ್ಯ ಯೋಜನೆಯಿಂದ 4.25 ಕೋಟಿ ಜನರಿಗೆ ಅನುಕೂಲವಾಗಿದೆ. ಇದಕ್ಕಾಗಿ ಸುಮಾರು 9,104 ಕೋಟಿ ರೂ. ವಿನಿಯೋಗಿಸಲಾಗಿದೆ. ಒಟ್ಟು ಗ್ಯಾರಂಟಿ ಯೋಜನೆಗಳಿಗೆ ಎಂದು 52 ಸಾವಿರ ಕೋಟಿ ಅನುದಾನವನ್ನು ಮೀಸಲಿದ್ದೇವೆ ಮತ್ತು ಖರ್ಚು ಮಾಡಿದ್ದೇವೆ. ಇದನ್ನು 56 ಸಾವಿರ ಕೋಟಿಗೆ ಏರಿಸುವ ಆಲೋಚನೆಯೂ ಇದೆ" ಎಂದು ವಿವರಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News