‘ನವೋದ್ಯಮಗಳಲ್ಲಿ ಹೂಡಿಕೆ’ ಆಸ್ಟ್ರೀಯಾ ನಿಯೋಗಕ್ಕೆ ಸಚಿವ ಎಂ.ಬಿ.ಪಾಟೀಲ್ ಆಹ್ವಾನ

Update: 2024-02-19 15:06 GMT

Photo: X/@MBPatil

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿನ ಸ್ಫೂರ್ತಿದಾಯಕ ನವೋದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಬೃಹತ್ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರು ಆಸ್ಟ್ರೀಯಾದ ನಿಯೋಗಕ್ಕೆ ಆಹ್ವಾನ ನೀಡಿದ್ದಾರೆ.

ಸೋಮವಾರ ಇಲ್ಲಿ ತಮ್ಮನ್ನು ಭೇಟಿಯಾದ ಆಸ್ಟ್ರೀಯಾದ ಕಾರ್ಮಿಕ ಹಾಗೂ ಆರ್ಥಿಕ ಸಚಿವ ಡಾ. ಮಾರ್ಟಿನ್ ಕೋಚರ್ ನೇತೃತ್ವದಲ್ಲಿನ ಉನ್ನತ ಮಟ್ಟದ ನಿಯೋಗದ ಜೊತೆಗಿನ ಸಮಾಲೋಚನೆ ವೇಳೆ ಅವರು ಈ ಆಹ್ವಾನ ನೀಡಿದ್ದಾರೆ. ಈ ಸಂದರ್ಭದಲ್ಲಿ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ದರು.

‘ನಿಮ್ಮ ಬಂಡವಾಳ ಹೂಡಿಕೆಗೆ ಕರ್ನಾಟಕವು ಫಲವತ್ತಾದ ನೆಲೆಯಾಗಿರಲಿದೆ. ಆಸ್ಟ್ರೀಯಾ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ರಾಜ್ಯ ಸರಕಾರವು ಅಗತ್ಯವಾದ ನೆರವು ನೀಡಲಿದೆ. ಆಸ್ಟ್ರಿಯಾ ಹಾಗೂ ಭಾರತದ ನವೋದ್ಯಮಗಳ ಸೇತುವೆಯು(ಎಐಎಸ್‍ಬಿ)ಎರಡೂ ಕಡೆಯ ನವೋದ್ಯಮಗಳು, ಹೂಡಿಕೆದಾರರು ಮತ್ತು ಮಾರ್ಗದರ್ಶಕರ ನಡುವಣ ವಿನಿಮಯ ಸುಲಭಗೊಳಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ’ ಎಂದು ಹೇಳಿದರು.

‘ಬಂಡವಾಳ ಹೂಡಿಕೆಗೆ ಪೂರಕ ಪರಿಸರ ನಿರ್ಮಿಸುವ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಗಳಿಗೆ ಅಗತ್ಯ ಬೆಂಬಲ ಒದಗಿಸುವ ಮೂಲಕ ನಾವು ನಾವೀನ್ಯತೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಆರ್ಥಿಕ ವೈವಿಧ್ಯತೆ ಹೆಚ್ಚಿಸಬಹುದು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಹುದು’ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ಆಸ್ಟ್ರೀಯಾದ ನಿಯೋಗವು ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿ ಕುರಿತು ಸಚಿವರ ಜೊತೆ ವಿವರವಾಗಿ ಚರ್ಚಿಸಿತು. ಸಾಂಸ್ಕೃತಿಕ ವಿನಿಮಯ, ಶೈಕ್ಷಣಿಕ, ಸಂಶೋಧನಾ ಸಹಯೋಗ, ಪ್ರವಾಸೋದ್ಯಮ ಸೇರಿದಂತೆ ವಾಣಿಜ್ಯ ಬಾಂಧವ್ಯ ವಿಸ್ತರಿಸಲು ವಿಪುಲ ಅವಕಾಶಗಳು ಇರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News