ಫಾಕ್ಸ್ ಕಾನ್ ಅಧ್ಯಕ್ಷರ ಜತೆ ಸಚಿವರಾದ ಎಂ.ಬಿ ಪಾಟೀಲ, ಪ್ರಿಯಾಂಕ್ ಖರ್ಗೆ ಮಹತ್ವದ ಚರ್ಚೆ
Update: 2023-08-01 07:03 GMT
ಚೆನ್ನೈ: ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸುತ್ತಿರುವ ಐಫೋನ್ ತಯಾರಿಕೆ ಕಂಪನಿ ಫಾಕ್ಸ್ ಕಾನ್ ಅಧ್ಯಕ್ಷ ಯಂಗ್ ಲಿಯು ಅವರೊಂದಿಗೆ ರಾಜ್ಯ ಸರಕಾರವು ಸೋಮವಾರ ಇಲ್ಲಿನ ಖಾಸಗಿ ಹೋಟೆಲಿನಲ್ಲಿ ಫಲಪ್ರದ ಚರ್ಚೆ ನಡೆಸಿತು.
ಸರಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಐಟಿ & ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದರು.
ಮಾತುಕತೆ ನಂತರ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಫಾಕ್ಸ್‌ಕಾನ್ ಕಂಪನಿಯು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದಾದರೆ ಎಲ್ಲ ರೀತಿಯ ಬೆಂಬಲ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಫಾಕ್ಸ್ ಕಾನ್ ಕಂಪನಿ ಅಧ್ಯಕ್ಷರೊಂದಿಗೆ ನಡೆದ ಮಾತುಕತೆ ನಿರೀಕ್ಷಿತ ಗತಿಯಲ್ಲಿ ಸಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಸರಕಾರದ ಉನ್ನತ ಅಧಿಕಾರಿಗಳಾದ ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸಭೆಯಲ್ಲಿ ಉಪಸ್ಥಿತರಿದ್ದರು.