ʼತುಂಗಭದ್ರ ಜಲಾಶಯʼ ವ್ಯರ್ಥವಾಗುತ್ತಿರುವ ನೀರಿನ ಸದ್ಬಳಕೆಗೆ ಕ್ರಮ : ಡಿ.ಕೆ.ಶಿವಕುಮಾರ್

Update: 2025-03-13 18:23 IST
ʼತುಂಗಭದ್ರ ಜಲಾಶಯʼ ವ್ಯರ್ಥವಾಗುತ್ತಿರುವ ನೀರಿನ ಸದ್ಬಳಕೆಗೆ ಕ್ರಮ : ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು: ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಪಂಪ್ ಮಾಡಿ ನೀರು ಬಳಸಿಕೊಳ್ಳುವ ಪರ್ಯಾಯ ಯೋಜನೆ ಬಗ್ಗೆ ಸರಕಾರ ಆಲೋಚಿಸುತ್ತಿದೆ ಎಂದರು.

ನಮ್ಮ ಅಧಿಕಾರಿಗಳು ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡದೆ ಪರ್ಯಾಯವಾದ ಆಲೋಚನೆ ತಿಳಿಸಿದ್ದಾರೆ. ನಮ್ಮ ಪಾಲಿನ ನೀರನ್ನು ಪಂಪ್ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದರಿಂದ ಮೂರು ರಾಜ್ಯಗಳಿಗೆ ಉಪಯೋಗವಾಗಲಿದೆ. ನಮಗೆ ಶೇ.65ರಷ್ಟು ಅವರಿಗೆ ಶೇ.35ರಷ್ಟು ಉಪಯೋಗವಾಗಲಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣ ಹಾಗೂ ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ನಾವು ನಮ್ಮ ಪಾಲಿನ ನೀರು ಉಳಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮಾ.18ಕ್ಕೆ ಪೆನ್ನಾರ್ ಕುರಿತು ಚರ್ಚೆ: ಇದೇ ಮಾ.18ರಂದು ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಕರೆದಿದ್ದಾರೆ. ಅಂದು ನವಲಿ ಅಣೆಕಟ್ಟು ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಪತ್ರ ಕೂಡ ಬರೆದಿದ್ದೇನೆ. ಎರಡು ರಾಜ್ಯಗಳ ಜತೆ ಚರ್ಚೆ ಮಾಡಿದ ನಂತರ ತುಂಗಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News