ತೆಂಗು ಬೆಳೆಗೆ ಬಿಳಿ ಹುಳ ರೋಗ ಮುಕ್ತಗೊಳಿಸಲು ಸರಕಾರ ಕ್ರಮ : ಎಂಬಿ ಪಾಟೀಲ್

Update: 2025-03-14 17:43 IST
ತೆಂಗು ಬೆಳೆಗೆ ಬಿಳಿ ಹುಳ ರೋಗ ಮುಕ್ತಗೊಳಿಸಲು ಸರಕಾರ ಕ್ರಮ : ಎಂಬಿ ಪಾಟೀಲ್
  • whatsapp icon

ಬೆಂಗಳೂರು : ರಾಜ್ಯದಲ್ಲಿ ತೆಂಗು ಬೆಳೆಗೆ ಬಿಳಿ ಹುಳ ರೋಗ ಬಾಧೆಯಿಂದ ಮುಕ್ತಗೊಳಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ತೆಂಗು ಅಭಿವೃದ್ಧಿ ಮಂಡಳಿಗೆ ಸುಮಾರು 15 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವರ ಪರವಾಗಿ ಉತ್ತರಿಸಿದ ಅವರು, ರಾಜ್ಯದ 14 ಜಿಲ್ಲೆಗಳ ಸುಮಾರು 1,48,448 ಹೆಕ್ಟೇರ್ ಪ್ರದೇಶದಲ್ಲಿನ ತೆಂಗು ಬೆಳೆಗೆ ಬಿಳಿ ನೊಣದ ಕೀಟ ಬಾಧೆ ಕಾಡುತ್ತಿದ್ದು, ಈ ಕೀಟ ಬಾಧೆಯನ್ನು ತೆಂಗಿನ ಮರಗಳ ನೈಸರ್ಗಿಕ ರೋಗ-ನಿರೋಧಕ ಶಕ್ತಿಯನ್ನು ವೃದ್ಧಿಸುವ ಮೂಲಕ ಸಮಗ್ರ ಪೋಷಕಾಂಶಗಳನ್ನು ಒದಗಿಸಿ ಕೀಟ ಮತ್ತು ರೋಗಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿಗೆ 15.31 ಕೋಟಿ ರೂ.ಗಳನ್ನು ಕಲ್ಪಿಸಲಾಗಿದೆ. ಆದರೆ, ಬಿಳಿ ನೊಣದ ಕೀಟಬಾಧೇಯನ್ನು ತಡೆಗಟ್ಟಲು ಡ್ರೋನ್ ಮೂಲಕ ರಾಸಾಯನಿಕ ಔಷಧಿ ಸಿಂಪಡಿಸುವ ಕಾರ್ಯಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದಕ್ಕೂ ಪ್ರಶ್ನೆ ಕೇಳಿದ್ದ ಸದಸ್ಯ ಸುರೇಶ್ ಬಾಬು ಅವರು, ಬಿಳಿ ಹುಳು ರೋಗಬಾಧೆಯಿಂದ ತೊಂದರೆಗೆ ಒಳಗಾಗಿರುವ ತೆಂಗು ಬೆಳೆಗಾರರಿಗ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿದರು.

ಇದೇ ವೇಳೆ ಸದಸ್ಯರಾದ ಕೆ.ಷಡಕ್ಷರಿ ಮತ್ತು ಸುರೇಶ್ ಗೌಡ ಮಧ್ಯಪ್ರವೇಶಿಸಿ ಮಾತನಾಡಿ, ಬಿಳಿ ಹುಳ ರೋಗಬಾಧೆಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ತೆಂಗು ಮಂಡಳಿ ಸಂಶೋಧನೆ ನಡೆಸುವ ಸಂಬಂಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News