ಬಿಜೆಪಿಯವರನ್ನು ಏಕೆ ನಾಡದ್ರೋಹಿಗಳೆಂದು ಕರೆಯಬಾರದು?: ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್
ಬೆಂಗಳೂರು : ‘ನೆಲ, ಜಲ, ಭಾಷೆ ಮತ್ತು ಅಸ್ಮಿತೆಯ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಾಗಿರಬೇಕು. ಆದರೆ, ನಾಡಿನ ಹಿತಾಸಕ್ತಿಯ ವಿಷಯದಲ್ಲಿ ಕೇಂದ್ರ ಆಟವಾಡುತ್ತಿರುವಾಗ ಬಿಜೆಪಿಯ ಒಬ್ಬನೇ ಒಬ್ಬ ನಾಯಕ ಕಡ್ಡಿ ತುಂಡಾದಂತೆ ವಿರೋಧ ಮಾಡಿದ್ದಾರೆಯೇ?. ತಮ್ಮ ದಿಲ್ಲಿ ಪ್ರಭುಗಳನ್ನು ಮೆಚ್ಚಿಸಲು ನಾಡಿನ ಹಿತಾಸಕ್ತಿಯನ್ನು ಬಲಿ ಕೊಡುತ್ತಿರುವ ಬಿಜೆಪಿಯವರನ್ನು ಏಕೆ ನಾಡದ್ರೋಹಿಗಳೆಂದು ಕರೆಯಬಾರದು?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡಲು ಹೊರಟಿರುವ ಕೇಂದ್ರದ ದಮನಕಾರಿ ನೀತಿ ವಿರೋಧಿಸಿ ದಕ್ಷಿಣದ ರಾಜ್ಯಗಳೆಲ್ಲಾ ಒಟ್ಟಾಗಿ ಹೋರಾಡುತ್ತಿವೆ. ಕ್ಷೇತ್ರಗಳ ಮರು ವಿಂಗಡಣೆಯಾದರೆ ಸಂಸತ್ತಿನಲ್ಲಿ ಕರ್ನಾಟಕವು ಸೇರಿದಂತೆ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವೇ ಕುಸಿಯಲಿದೆ. ಇದು ಆಘಾತಕಾರಿ ಬೆಳವಣಿಗೆ. ಇದನ್ನು ದಕ್ಷಿಣದ ಎಲ್ಲ ರಾಜ್ಯಗಳು ವಿರೋಧಿಸಲೇಬೇಕಿದೆ. ವಿರೋಧಿಸುತ್ತಲೇ ಇವೆ’ ಎಂದು ಉಲ್ಲೇಖಿಸಿದ್ದಾರೆ.
ಆದರೆ ಕ್ಷೇತ್ರಗಳ ಮರು ವಿಂಗಡಣೆ ವಿರುದ್ಧದ ಹೋರಾಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ಕಣ್ಣಿಗೆ ರಾಷ್ಟ್ರದ್ರೋಹದಂತೆ ಕಂಡಿದೆ. ಮೋದಿ ಸರಕಾರವನ್ನು ಮೆಚ್ಚಿಸಲು ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಲಜ್ಜೆಗೆಟ್ಟವರಂತೆ ವರ್ತಿಸುತ್ತಿರುವ ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರ ಎಸಗುತ್ತಿರುವ ಅನ್ಯಾಯ ಅರ್ಥವಾಗುವುದು ಯಾವಾಗ?’ ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.
‘ರಾಜ್ಯಗಳಿಗೆ ಮಾರಕವಾಗುವ ಎನ್‍ಇಪಿ ಜಾರಿಗೆ ತಂದಾಗ, ತ್ರಿಭಾಷಾ ಸೂತ್ರ ತಂದಾಗ, ಕ್ಷೇತ್ರಗಳ ಮರು ವಿಂಗಡಣೆ ಮಾಡಲು ಹೊರಟಾಗ ಬಿಜೆಪಿಯವರ ನಾಲಗೆ ಹೊರಳಾಡುವುದೇ ಇಲ್ಲ. ರಾಜ್ಯಕ್ಕೆ ಏನೇ ದ್ರೋಹವಾದರೂ ಸರಿ ಮೋದಿ ಸರಕಾರದ ವಿರುದ್ಧ ಬಾಯಿ ಬಿಡಬಾರದು ಎಂಬ ಅಲಿಖಿತ ನಿಯಮವೊಂದನ್ನು ರಾಜ್ಯ ಬಿಜೆಪಿ ನಾಯಕರು ಪಾಲಿಸುತ್ತಿದ್ದಾರೆ. ಇದಕ್ಕಿಂತ ಗುಲಾಮಿತನ ಇನ್ನೇನಿದೆ?’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಡಿ ಲಿಮಿಟೇಷನ್ ಮಾಡಲು ಹೊರಟಿರುವ ಕೇಂದ್ರದ ದಮನಕಾರಿ ನೀತಿ ವಿರೋಧಿಸಿ ದಕ್ಷಿಣದ ರಾಜ್ಯಗಳೆಲ್ಲಾ ಒಟ್ಟಾಗಿ ಹೋರಾಡುತ್ತಿವೆ. ಡಿ ಲಿಮಿಟೇಷನ್ ಆದರೆ ಸಂಸತ್ತಿನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವೇ ಕುಸಿಯಲಿದೆ. ಇದು ಆಘಾತಕಾರಿ ಬೆಳವಣಿಗೆ. ಇದನ್ನು ದಕ್ಷಿಣದ ಎಲ್ಲಾ ರಾಜ್ಯಗಳು ವಿರೋಧಿಸಲೇಬೇಕಿದೆ..ವಿರೋಧಿಸುತ್ತಲೇ ಇವೆ.…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 14, 2025