ರಿಟ್ ಅರ್ಜಿ ಇತ್ಯರ್ಥವಾದ ತಕ್ಷಣವೇ ಪಿಡಿಒಗಳಿಗೆ ಮುಂಭಡ್ತಿ : ಪ್ರಿಯಾಂಕ್ ಖರ್ಗೆ

Update: 2025-03-14 19:13 IST
ರಿಟ್ ಅರ್ಜಿ ಇತ್ಯರ್ಥವಾದ ತಕ್ಷಣವೇ ಪಿಡಿಒಗಳಿಗೆ ಮುಂಭಡ್ತಿ : ಪ್ರಿಯಾಂಕ್ ಖರ್ಗೆ
  • whatsapp icon

ಬೆಂಗಳೂರು : ರಾಜ್ಯದಲ್ಲಿ ಪಂಚಾಯತ್‍ರಾಜ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಮುಂಬಡ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಇತ್ಯರ್ಥವಾದ ತಕ್ಷಣವೇ ಆದಷ್ಟು ಬೇಗ ಇದರ ಬಗ್ಗೆ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಚಿದಾನಂದಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಿಡಿಒಗಳಿಗೆ 10ರಿಂದ 11 ವರ್ಷಗಳ ಕಾಲ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿರುವುದರಿಂದ ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ರಿಟ್ ಅರ್ಜಿ ಇತ್ಯರ್ಥವಾದ ತಕ್ಷಣವೇ ಮುಂಬಡ್ತಿ ನೀಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ರಾಜ್ಯದ ಕೆಲವು ಕಡೆಗಳಲ್ಲಿ 2 ರಿಂದ 3 ಪಂಚಾಯಿತಿಗಳನ್ನು ಒಬ್ಬರೇ ಪಿಡಿಒ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದೆ. ಮುಂಬಡ್ತಿ ನೀಡಲು ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 247 ಪಿಡಿಒ ನೇಮಕಾತಿಗೆ ಸಂಬಂಧಿಸಿದಂತೆ ಪಟ್ಟಿಯನ್ನು ಪ್ರಕಟಿಸುವಂತೆ ಅಲ್ಲಿನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಪರೀಕ್ಷೆ ನಡೆದು ಎರಡೂವರೆ ತಿಂಗಳು ಆಗಿರುವುದರಿಂದ ಏಕೆ ವಿಳಂಬವಾಗುತ್ತದೆ ಎಂದು ಕೇಳಿದ್ದೇವೆ. ಅಂತಿಮ ಪಟ್ಟಿಯನ್ನು ಪ್ರಕಟಿಸಿದ ನಂತರ ನಮಗೆ 247 ಹುದ್ದೆಗಳು ಲಭ್ಯವಾಗಲಿವೆ. ಇದರಿಂದ ಒಬ್ಬರಿಗೆ ಒಂದೇ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ದೇಶದಲ್ಲೇ ಅತಿದೊಡ್ಡ ಭ್ರಷ್ಟಾಚಾರ ನಡೆದಿದೆ. ಇಲ್ಲಿ 350 ಕೋಟಿ ರೂ. ಹಗರಣವಾಗಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 37 ಪಿಡಿಒ, ಇಒ ಮತ್ತಿತರ ಅಧಿಕಾರಿಗಳನ್ನು ಅಮಾನತುಪಡಿಸಲಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನರೇಗಾ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 344 ಸಹಾಯಕ ನಿರ್ದೇಶಕ ಹುದ್ದೆಗಳು ಖಾಲಿಯಿವೆ. ಇದನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು. ಯಾರಿಗೂ ಕಾರ್ಯ ಒತ್ತಡವಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News