ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Update: 2025-03-14 14:22 IST
ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
  • whatsapp icon

ಬೆಂಗಳೂರು : ‘ರಾಜ್ಯದಲ್ಲಿ ಯಾವ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಸ್ಥಾಪಿಸಲಾಗಿದ್ದ ಹೊಸ ವಿವಿಗಳನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಅಧ್ಯಯನ ನಡೆಸಲು ಸಂಪುಟ ಉಪಸಮಿತಿ ರಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ನಿಲುವಳಿ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹೊಸ ವಿವಿಗಳನ್ನು ಮುಂದುವರೆಸಬೇಕೋ ಅಥವಾ ಬೇಡವೇ ಎಂಬ ಬಗ್ಗೆ ಅಧ್ಯಯನ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿಲಾಗಿದೆ. ಸಮಿತಿ ಇನ್ನೂ ವರದಿ ನೀಡಿಲ್ಲ ಎಂದರು.

ಉಪಸಮಿತಿ ವರದಿ ಬಂದ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಉಪ ಸಮಿತಿ ವರದಿ ನೀಡುವ ಮೊದಲೇ ವಿಪಕ್ಷ ಸದಸ್ಯರಿಗೆ ಆತಂಕ ಏಕೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವರದಿ ಬರುವ ಮೊದಲೇ ವಿವಿಗಳನ್ನು ಮುಚ್ಚಲಾಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಇಂತಹ ಯಾವುದೇ ತೀರ್ಮಾನವನ್ನು ನಾವು ಮಾಡಿಲ್ಲ ಎಂದು ವಿವರಣೆ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಹೊಸ ವಿವಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಆತಂಕ ಸೃಷ್ಟಿಸಿದೆ. ಸರಕಾರ ಈ ಕುರಿತು ಸ್ಪಷ್ಟಣೆ ನೀಡಬೇಕು ಎಂದು ಕೋರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ‘ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪ್ರತಿದಿನ ಒಂದೊಂದು ನಿಲುವಳಿ ಸೂಚನೆ ಹಿಡಿದು ಬಂದರೆ ಕಲಾಪ ಹೇಗೆ ನಡೆಸುವುದು. ಬಜೆಟ್ ಮೇಲೆ ಚರ್ಚೆ ಮಾಡುವಾಗಲೇ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಬಹುದಲ್ಲವೇ?’ ಎಂದು ಸಲಹೆ ನೀಡಿದರು.

ಬಿಜೆಪಿ ಸದಸ್ಯ ಡಾ.ಅಶ್ವಥ್ ನಾರಾಯಣ್ ಎದ್ದುನಿಂತು, ‘ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಮಹತ್ವದ್ದು, ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಮೂಲಕ ಆತಂಕ ನಿರ್ಮಾಣ ಮಾಡಲಾಗುತ್ತಿದೆ. ಆಗ ಸಿಎಂ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಾರೆ. ಸಚಿವರು ಆರ್ಥಿಕ ಕೊರತೆಯ ಬಗ್ಗೆ ಹೇಳಿದ್ದಾರೆ ಎಂದು ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News