ನಿಬಂಧನೆ ಪಾಲಿಸಿದರೆ ಕೆಐಓಸಿಎಲ್‍ಗೆ ಅನುಮತಿ : ಸಚಿವ ಈಶ್ವರ್ ಖಂಡ್ರೆ

Update: 2025-03-14 17:40 IST
ನಿಬಂಧನೆ ಪಾಲಿಸಿದರೆ ಕೆಐಓಸಿಎಲ್‍ಗೆ ಅನುಮತಿ : ಸಚಿವ ಈಶ್ವರ್ ಖಂಡ್ರೆ
  • whatsapp icon

ಬೆಂಗಳೂರು : ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ(ಕೆಐಎಸಿಎಲ್) ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಪಾಲನೆ ಮಾಡಿದರೆ ಸಂಡೂರು, ದೇವದಾರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 73ರಡಿ ಬಿಜೆಪಿ ಸದಸ್ಯ ಭರತ್ ಶೆಟ್ಟಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, 2022ರ ಡಿಸೆಂಬರ್ 16ರಂದು ಉಪಯೋಗಿ ಸಂಸ್ಥೆ ಉನ್ನತಾಧಿಕಾರ ಸಮಿತಿಯ ಶಿಫಾರಸು ಮತ್ತು ಸೂಚನೆಗಳನ್ನು ಪಾಲನೆ ಮಾಡಬೇಕು ಎಂಬ ಷರತ್ತುಗೊಳಪಟ್ಟು ದೇವದರಿಯಲ್ಲಿ ಗಣಿಗಾರಿಕೆ ನಡೆಸಲು ಅನುಮೋದನೆ ನೀಡಲಾಗಿದೆ ಎಂದರು.

ಈ ಹಿಂದೆ ಕೆಐಓಸಿಎಲ್ ರಾಜ್ಯದಲ್ಲಿ ಗಣಿಗಾರಿಕೆ ನಡೆಸುವಾಗ ಹಲವು ನಿಯಮಗಳ ಉಲ್ಲಂಘನೆ ಮಾಡಿದ್ದು, ನೋಟಿಸ್ ನೀಡಲಾಗಿದೆ. ಲಕ್ಯಾ ಅಣೆಕಟ್ಟೆ ಎತ್ತರಿಸಿ 340 ಹೆಕ್ಟೇರ್ ಅರಣ್ಯಕ್ಕೆ ಹಾನಿ ಮಾಡಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಕೊಳವೆ ಮಾರ್ಗ ಅಳವಡಿಸುವುದೂ ಸೇರಿ 465.73 ಹೆಕ್ಟೇರ್ ಪ್ರದೇಶದಲ್ಲಿ ಅನುಮತಿ ಇಲ್ಲದೆ ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಿದ್ದಾರೆ. ಈ ಪರಿಸರ ಹಾನಿಗೆ 142 ಕೋಟಿ ರೂ. ಕಟ್ಟಬೇಕಿದೆ ಎಂದರು.

ಇದರ ಜೊತೆಗೆ ಎನ್‍ಪಿವಿ. ಶುಲ್ಕ 628 ಕೋಟಿ ರೂ. ಹಾಗೂ ಬಡ್ಡಿ ಸೇರಿ ಒಟ್ಟಾರೆ 3000 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ. ಈ ಎಲ್ಲ ನಿಬಂಧನೆಯನ್ನು ಸಂರ್ಪೂಣವಾಗಿ ಅನುಪಾಲನೆ ಮಾಡಿದಲ್ಲಿ, ಸದರಿ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಹಸ್ತಾಂತರ ಮಾಡುವ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಮಿಗಿಲಾಗಿ ಸದರಿ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿದೆ ಎಂದೂ ಸಚಿವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News